ಮಹಿಳೆಗೆ ಮುಕ್ತ ವಾತಾವರಣ ನಿರ್ಮಾಣವಾಗಲಿ
ಮೈಸೂರು: ಸಮಾಜದಲ್ಲಿ ಮಹಿಳೆಗೆ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದು ಕವಯತ್ರಿ ಡಾ.ಲತಾ ರಾಜಶೇಖರ್ ಆಶಿಸಿದರು.
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಶಾರದಾ ವಿಲಾಸ ಕಾಲೇಜಿನ ಡಾ.ಚಿನ್ನಸ್ವಾಮಿ ಸಭಾಂಗಣದಲ್ಲಿ ಭಾನುವಾರ ಅಕಾಡೆಮಿಯ 13ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕನ್ನಡ ಗೀತೆಗಳು, ಮುಕ್ತಕ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದ ಸಮಾನತೆ ಇಂದಿಗೂ ಮಹಿಳೆಯರಿಗೆ ದೊರಕಿಲ್ಲ. ಇಂದು ಮಹಿಳೆಯರು ರಾತ್ರಿ ವೇಳೆಯಲ್ಲಿ ಇರಲಿ, ಹಗಲಿನಲ್ಲಿಯೇ ಸುರಕ್ಷತೆಯಿಂದ ಓಡಾಡುವುದು ಕಷ್ಟವಾಗಿದೆ. ದೆಹಲಿಯ ಅತ್ಯಾಚಾರ ಪ್ರಕರಣ ಕೇವಲ ಒಂದು ಉದಾಹರಣೆ ಮಾತ್ರ. ಹಲವಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಇದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಸ್ತ್ರೀಯರನ್ನು ಮಾತೆಯೆಂದು ಗೌರವಿಸುವ ಈ ನೆಲದಲ್ಲಿ ಮಹಿಳೆಯರಿಗೆ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ಕಠಿಣ ಶಿಕ್ಷೆಯಾಗಲಿ: ದುಬೈ, ಅಮೆರಿಕ, ಲಂಡನ್, ಸ್ವಿಡನ್ ಮತ್ತಿತರ ದೇಶದಲ್ಲಿ ಮಹಿಳೆಯರು ಅರಬೆತ್ತಲೆಯಲ್ಲಿದ್ದರೂ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ. ಏಕೆಂದರೆ ಅಲ್ಲಿ ಕಾನೂನು ತುಂಬ ಪ್ರಬಲವಾಗಿದೆ. ಭಾರತದಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರಿಗೆ ಕಠಿಣ ಶಿಕ್ಷೆಯಾಗಬೇಕು. ಕಡಿಮೆ ಶಿಕ್ಷೆ, ದಂಡ ಹಾಗೂ ಕೆಲವೊಮ್ಮೆ ವಿಚಾರಣೆಯಿಂದ ಸೂಕ್ತ ಸಾಕ್ಷಿಯಿಲ್ಲದೆ ಪಾರಾಗುವುದು, ಅಲ್ಲದೆ ಪೊಲೀಸರ ಅಸಹಾಯಕತೆಯಿಂದ ಅಪರಾಧಿಗಳು ತಪ್ಪಿಸಿಕೊಳ್ಳುವ ಉದಾಹರಣೆಗಳಿವೆ. ಆದ್ದರಿಂದ ಮೊದಲು ಈ ಸಂಬಂಧ ಕಾನೂನು ಕೈ ಬಲಪಡಿಸಬೇಕು ಎಂದರು.
ಸಾಹಿತ್ಯದಲ್ಲಿ ಮುಕ್ತಕ ಒಂದು ಕಾವ್ಯ ಪ್ರಕಾರ. ವಚನ, ಕಾವ್ಯ, ಚುಟುಕು ಇವುಗಳಲ್ಲಿ ತೊಡಗಿಸಿಕೊಂಡಿರುವ ಮಹಿಳಾ ಲೇಖಕಿಯರ ಸಂಖ್ಯೆ ಮುಕ್ತಕ ಸಾಹಿತ್ಯದಲ್ಲಿ ಕಡಿಮೆ. ಮುಕ್ತಕ ಸಾಹಿತ್ಯ ಅಕಾಡೆಮಿಯು ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡುತ್ತಿದೆ ಎಂದು ಪ್ರಶಂಸಿಸಿದ ಅವರು, ಮಹಿಳೆಯರ ಸ್ವಾತಂತ್ರ್ಯ ಸಮಾನತೆಯನ್ನು ಗೌರವಿಸುವ ಹಾಗೂ ವಿಚಾರ ಅಭಿವ್ಯಕ್ತವಾಗುವ ಸಾಹಿತ್ಯಗಳು ಹೆಚ್ಚಾಗಿ ಹೊರಬರಲಿ ಎಂದರು. ಕಲ್ಪವೃಕ್ಷ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ್ ಅವರು, ಎಸ್.ರಾಮಪ್ರಸಾದರ ಅಂದಿನ ಇಂದಿನ ಪ್ರಾಣಿಗಳು ಹಾಗೂ ಡಾ.ಎಂ.ಪಿ. ಮಂಜಪ್ಪಶೆಟ್ಟಿ ಮಸಗಲಿ ಅವರ ಮಹಾಕವಿಯೊಂದಿಗೆ ಮಸಗಲಿ ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.
ಈ ಎರಡು ಕೃತಿಗಳ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಎನ್. ಹೆಗಡೆ ಮತ್ತು ಡಾ. ಎಸ್.ಎನ್. ರಾಮಸ್ವಾಮಿ ಮಾತನಾಡಿದರು. ಅಕಾಡೆಮಿ ಅಧ್ಯಕ್ಷ ಎಸ್. ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನಂತರ ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ.ಧರಣೀದೇವಿ ಮಾಲಗತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ಅನೇಕ ಕವಿಗಳು ಮುಕ್ತಕ ವಾಚಿಸಿದರು. ವಿದುಷಿ ಶಶಿಕಲಾ ಚಂದ್ರಶೇಖರ್ ಕನ್ನಡ ಗೀತೆಗಳನ್ನು ಹಾಡಿ ಸಭಿಕರಿಗೆ ಮುದ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.