19ರಿಂದ ಸ್ವರ್ಣ ಕದಂಬ ನಾಟಕೋತ್ಸವ
ಮೈಸೂರು: 1963 ರಲ್ಲಿ ಸ್ಥಾಪಿಸಲಾದ ಕದಂಬ ರಂಗವೇದಿಕೆಯ ಸ್ವರ್ಣ ಮಹೋತ್ಸವದ ಅಂಗವಾಗಿ ಫೆ. 19 ರಿಂದ 23 ರವರೆಗೆ ರಂಗಾಯಣದಲ್ಲಿ ಸ್ವರ್ಣ ಕದಂಬ ನಾಟಕೋತ್ಸವ ಏರ್ಪಡಿಸಲಾಗಿದೆ.
ಫೆ. 19ರ ಸಂಜೆ 5ಕ್ಕೆ ವನರಂಗದಲ್ಲಿ ನಡೆಯುವ ನಾಟಕೋತ್ಸವವನ್ನು ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಉದ್ಘಾಟಿಸಲಿದ್ದು, ಬಂಗಾರ ಬಾಗಿನ ಸಂಚಿಕೆಯನ್ನು ಹಿರಿಯ ರಂಗಕರ್ಮಿ ಡಾ.ನ. ರತ್ನ ಬಿಡುಗಡೆಗೊಳಿಸುವರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಅಧ್ಯಕ್ಷತೆ ವಹಿಸುವರು.
ನಾಟಕಕಾರ ಬಿ.ಎಸ್. ಕೇಶವರಾವ್, ರಂಗನಿರ್ದೇಶಕ ಪ್ರೊ. ಎಚ್.ಎಸ್. ಉಮೇಶ್, ನಟ ವರದರಾಜ್ ಹೆಮ್ಮಿಗೆ, ಬಿ.ಕೆ.ಎನ್. ರಾವ್, ಹಿರಿಯ ಕಲಾವಿದ ಹರಿಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಚಾರ ಸಂಕಿರಣ: ಫೆ. 20ರ ಸಂಜೆ 5ಕ್ಕೆ ಶ್ರೀರಂಗ ವೇದಿಕೆಯಲ್ಲಿ ನಡೆಯುವ ವಿಚಾರ ಸಂಕಿರಣವನ್ನು ರಂಗತಜ್ಞ ಶ್ರೀನಿವಾಸ ಜಿ. ಕಪ್ಪಣ್ಣ ಉದ್ಘಾಟಿಸಲಿದ್ದು, ರಂಗಾಯಣ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಅಧ್ಯಕ್ಷತೆ ವಹಿಸುವರು. ರಂಗ ಸಂಘಟಕ ಕೆ.ವಿ. ನಾಗರಾಜಮೂರ್ತಿ, ಪ್ರೊ. ಜಯಪ್ರಕಾಶ್‌ಗೌಡ, ಪ್ರಸಾದ್ ಕುಂದೂರು ವಿಚಾರ ಮಂಡಿಸುವರು. ಫೆ. 23ರ ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಂಗಭೂಮಿ ನಟ ಸಿ.ಆರ್. ಸಿಂಹ ಭಾಷಣ ಮಾಡುವರು. ಹಿರಿಯ ರಂಗ ಕಲಾವಿದ ಏಣಗಿ ಬಾಳಪ್ಪ ಅವರಿಗೆ ಗೌರವ ಸಮರ್ಪಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್. ರಾಮಕೃಷ್ಣ ಅಧ್ಯಕ್ಷತೆ ವಹಿಸುವರು ಎಂದರು.
ರಂಗಕರ್ಮಿ ಶ್ರೀಕಂಠ ಗುಂಡಪ್ಪ, ಅಶ್ವತ್ಥ್ ಕದಂಬ, ಕಣಗಾಲ್ ಶ್ರೀನಿವಾಸಮೂರ್ತಿ, ಪ್ರೊ.ಸಿ.ವಿ. ಶ್ರೀಧರಮೂರ್ತಿ ಇದ್ದರು.