ಆರಾಧನಾ ಉತ್ಸವಕ್ಕೆ ಚಾಲನೆ
ಯಳಂದೂರು: ತಾಲೂಕಿನ ಕೃಷ್ಣಾಪುರ ಗ್ರಾಮದ ಶನೇಶ್ವರ ದೇವಾಲಯದಲ್ಲಿ 3 ದಿನಗಳ ಕಾಲ ಆರಾಧನಾ ಮಹೋತ್ಸವ ನಡೆಯಲು ನ್ಯಾಯಾಲಯ ಆದೇಶ ನೀಡಿದ್ದು, ಇಂದು ಮಹೋತ್ಸವಕ್ಕೆ ಪೊಲೀಸರ ಬಿಗಿ ಭದ್ರತೆಯಲ್ಲಿ ಚಾಲನೆ ನೀಡಲಾಯಿತು.
ಶನಿವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ಹಾಲಿನ ಅಭಿಷೇಕ ಸೇರಿದಂತೆ ಎಣ್ಣೆಮಜ್ಜನ, ತುಪ್ಪ, ಅರಿಶಿನ, ಕುಂಕುಮ, ಗಂಧದ ನೈವೇದ್ಯ ಪೂಜೆ ನಡೆದವು. ನಂತರ ವಿಧಿ ವಿಧಾನಗಳ ಪ್ರಕಾರ ಯಜ್ಞ ಯಾಗಾದಿ, ಪೂಜೆ ಪುನಸ್ಕಾರ ನಡೆದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಭಕ್ತರು ಹರಕೆ ತೀರಿಸಿದರು. ಪ್ರತಿ ವರ್ಷ ಗ್ರಾಮಸ್ಥರ ಸಹಕಾರದಿಂದ ಉಚಿತ ಸಾಮೂಹಿಕ ವಿವಾಹ ಮತ್ತು ಅನ್ನಸಂತರ್ಪಣೆ ಕಾರ್ಯ ವಿಜೃಂಭಣೆಯಿಂದ ನಡೆಯುತ್ತಿದ್ದರಿಂದ ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಹರಿದು ಬರುತ್ತಿತ್ತು. ಆದರೆ ಈ ಬಾರಿ ಅರ್ಚಕ ಸಿದ್ದಪ್ಪಸ್ವಾಮಿ ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರ ವಿರೋಧ ಕಟ್ಟಿಕೊಂಡು ಒಬ್ಬರೇ ಆರಾಧನಾ ಮಹೋತ್ಸವಕ್ಕೆ ಮುಂದಾದ ಕಾರಣ ಈ ಕೃಷ್ಣಾಪುರದ ಯಜಮಾನರು ಹಳ್ಳಿ ಹಳ್ಳಿಗೂ ತೆರಳಿ ಈ ಬಾರಿ ಆರಾಧನಾ ಉತ್ಸವ ಕಾರ್ಯಕ್ರಮಕ್ಕೆ ಬರಬೇಡಿ ಎಂದು ಕರಪತ್ರಗಳನ್ನು ಮುದ್ರಿಸಿ ಹಂಚಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿಲ್ಲ.