ಏಕರೂಪ ಶಿಕ್ಷಣ ಜಾರಿಯಾಗಲಿ
ಕೆ.ಆರ್. ನಗರ: ದೇಶದಲ್ಲಿ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಉಳ್ಳವರು ಮತ್ತು ಇಲ್ಲದವರ ನಡುವೆ ಕಂದಕವನ್ನುಂಟು ಮಾಡುವ ರೀತಿಯಲ್ಲಿದೆ. ಎಲ್ಲರ ಏಳಿಗೆಗಾಗಿ ಏಕರೂಪದ ಶಿಕ್ಷಣ ಜಾರಿಗೊಳ್ಳಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲೂಕು ಜ್ಞಾನ ವಿಜ್ಞಾನ ಸಮಿತಿ ಶನಿವಾರ ಆಯೋಜಿಸಿದ್ದ ಶಿಕ್ಷಣ ಶಿಲ್ಪಿ ಎಂಬ ಪತ್ರಿಕೆ ಬಿಡುಗಡೆ ಹಾಗೂ ಶೈಕ್ಷಣಿಕ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 6 ದಶಕ ಕಳೆದಿದ್ದರೂ ಸರ್ಕಾರ ಪ್ರಬಲವಾದ ಶಿಕ್ಷಣ ನೀತಿ ಅಳವಡಿಸಲು ವಿಫಲಗೊಂಡಿದೆ ಎಂದು ವಿಷಾದಿಸಿದರು.
ಒಂದೆಡೆ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದು, ಮತ್ತೊಂದೆಡೆ ಖಾಸಗಿ ಶಾಲೆಗಳ ತೆರೆಯಲು ಅನುಮತಿ ನೀಡುವ ಮೂಲಕ ತಾರತಮ್ಯ ನೀಡಿ ಅನುಸರಿಸುವುದು ಅಲ್ಲದೆ, ಶಿಕ್ಷಣ ವ್ಯಾಪಾರಿಕರಣಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಆರೋಪಿಸಿದರು. ಪ್ರಸ್ತುತ ಪಠ್ಯಕ್ರಮಗಳು ಮೇಲ್ವರ್ಗದವರ ಸಂಸ್ಕೃತಿಯನ್ನು ಮಾತ್ರ ಬಿಂಬಿಸುವಂತಿದ್ದು, ಇದು ಮಕ್ಕಳಲ್ಲಿ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಸಾಮಾನ್ಯ ಜನರ ಸಂಸ್ಕೃತಿ ಬಿಂಬಿಸುವ ರೀತಿಯ ಪಠ್ಯಕ್ರಮ ರಚನೆಯಾಗಬೇಕು ಎಂದು ಅವರು ಹೇಳಿದರು.
ಶಿಕ್ಷಣದಿಂದ ಬದಲಾವಣೆ ಸಾಧ್ಯ. ಈ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು, ಮಕ್ಕಳನ್ನು ದೇವರ ಸಮಾನ ಕಾಣಬೇಕು. ಹಾದಿ ತಪ್ಪಿಯೂ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನೀಡಲು ಪ್ರಯತ್ನಿಸಬಾರದು ಎಂದು ಸಲಹೆ ನೀಡಿದರು.
ಮೈಸೂರು ವಿವಿಯ ಪ್ರೊ. ಆರ್. ಇಂದಿರಾ ಮಾತನಾಡಿದರು. ನವನಗರ ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಬಸಂತ್, ಶಿಕ್ಷಣ ಶಿಲ್ಪಿ ಪತ್ರಿಕೆ ಸಂಪಾದಕ ಈ. ನಂಜಪ್ಪ, ಚಿಕ್ಕಬಳ್ಳಾಪುರ ಬಿ.ಇಡಿ ಕಾಲೇಜಿನ ಪ್ರೊ. ಕೋಡಿರಂಗಪ್ಪ, ಬಿಇಒ ಎಸ್.ಟಿ. ಜವರೇಗೌಡ, ಬಿಆರ್‌ಸಿ ಡಾ. ದೊಡ್ಡೇಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊಂಡರಸಯ್ಯ, ಜ್ಞಾನ ವಿಜ್ಞಾನ ಸಮಿತಿಯ ತಾ. ಅಧ್ಯಕ್ಷ ಡಾ. ಬ್ರಿಜ್ ಮೋಹನ್‌ಕುಮಾರ್, ಉಪಾಧ್ಯಕ್ಷ ಎಚ್.ಟಿ. ಲೋಕೇಶ್, ಸಹ ಕಾರ್ಯದರ್ಶಿ ಕೆ.ಎಚ್. ಗಿರೀಶ್, ನಗರಾಧ್ಯಕ್ಷ ಎಂ.ಎನ್. ರವಿಕುಮಾರ್, ಲಕ್ಷ್ಮಿಕಾಂತ್, ಸಾಯಿ ನಳಂದ ವಿದ್ಯಾಸಂಸ್ಥೆಯ ಎಸ್. ಮಂಜುನಾಥ್, ತಾ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್. ಸ್ವಾಮಿ ಇದ್ದರು.