ಮನೋಲ್ಲಾಸ ತುಂಬಿದ ಮಾನಸೋಲ್ಲಾಸ ಓಟ
ಮೈಸೂರು: ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯ ಪ್ರೋತ್ಸಾಹಿಸುವ ಸಲುವಾಗಿ ಮಾನಸ ಗಂಗೋತ್ರಿಯಲ್ಲಿ ದೈಹಿಕ ಸಾಮರ್ಥ್ಯ ಓಟವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಮೈಸೂರು ವಿವಿಯ ಸ್ನಾತಕೋತ್ತರ ಕ್ರೀಡಾ ಮಂಡಳಿಯು ಮಾನಸಗಂಗೋತ್ರಿಯ ಉಪಹಾರ ಮಂದಿರದ ಮುಂದೆ ಏರ್ಪಡಿಸಿದ್ದ ಮಾನಸೋಲ್ಲಾಸ - 2013 ಓಟದ ಸ್ಪರ್ಧೆಯನ್ನು ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ. ಬಿ.ಎಸ್. ವಿಶ್ವನಾಥ್, ಮೈಸೂರು ವಿವಿ ಹಣಕಾಸು ಅಧಿಕಾರಿ ಡಾ. ಚಂದ್ರಕುಮಾರ್, ಸ್ನಾತಕೋತ್ತರ ಕ್ರೀಡಾ ಮಂಡಳಿ ಅಧ್ಯಕ್ಷ ಪ್ರೊ. ರವಿ ಹಾಗೂ ಕಾರ್ಯದರ್ಶಿ ಡಾ. ಪಿ. ಕೃಷ್ಣಯ್ಯ ಇದ್ದರು.
ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಉಲ್ಲಾಸಕ್ಕಾಗಿ ಬೆಳಗಿನ ಕ್ರೀಡಾ ವಿಹಾರ ಅವಶ್ಯಕ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ನಿಸರ್ಗದತ್ತ ಹೊರಾಂಗಣದಲ್ಲಿ ಕ್ರೀಡೆಯಲ್ಲಿ ತೊಡಗಿದರೆ ನಮ್ಮ ದೇಹ ಹಾಗೂ ಮನಸ್ಸು ಉಲ್ಲಾಸವಾಗಲಿದೆ ಎಂಬ ಕಾರಣಕ್ಕೆ ಈ ಓಟ ಆಯೋಜಿಸಲಾಗಿದೆ ಎಂದು ಡಾ. ಪಿ. ಕೃಷ್ಣಯ್ಯ ತಿಳಿಸಿದರು. ನಂತರ ಕ್ಯಾಂಟಿನ್ ಮುಂಭಾಗದಿಂದ ಆರಂಭವಾದ ಓಟವು, ಗಣಿತಶಾಸ್ತ್ರ ವಿಭಾಗ, ಭೌತಶಾಸ್ತ್ರ ವಿಭಾಗ, ಒಡಿ ಸ್ನಾತಕೋತ್ತರ ಕೇಂದ್ರ ಮುಂದಿರುವ ಅರಳಿ ಮರದ ಕಡೆಗೆ ಸಾಗಿ, ಅಲ್ಲಿಂದ ರಾಣಿ ಬಹದ್ದೂರ್ ಸಭಾಂಗಣದ ಹಿಂದಿನ ರಸ್ತೆ ಮುಖಾಂತರ ಐಸಿಎಂ, ಮನೋಶಾಸ್ತ್ರ ವಿಭಾಗ, ಭೂಗರ್ಭಶಾಸ್ತ್ರ ವಿಭಾಗ ಮುಖೇನ ಕ್ಯಾಂಟಿನ್ ಮುಂಭಾಗದಿಂದ ಸೆನೆಟ್ ಹಾಲ್ ಬಳಸಿಕೊಂಡು ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.
ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆದ 3 ಕಿಮೀ ಓಟದ ಈ ಸ್ಪರ್ಧೆಯಲ್ಲಿ ಮೊದಲು ಬಂದ 25 ಮಂದಿ ವಿದ್ಯಾರ್ಥಿನಿಯರು, 25 ಮಂದಿ ವಿದ್ಯಾರ್ಥಿಗಳು, 25 ಮಂದಿ ಅಧ್ಯಾಪಕರು ಹಾಗೂ 25 ಮಂದಿ ಅಧ್ಯಾಪಕೇತರರಿಗೆ ಬಹುಮಾನ ನೀಡಲಾಯಿತು. 600 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.