ರಸ್ತೆ ಸುರಕ್ಷೆ ಪಾಠ ಮಾಡಿದ ಚಿಣ್ಣರು!
ಮೈಸೂರು: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಲ್ಲಿನ ವಿಜಯನಗರದ ಪೊದಾರ್ ಜಂಬು ಕಿಡ್ಸ್ ಶಾಲೆಯು ಶನಿವಾರ ಜಾಗೃತಿ ಜಾಥಾ ನಡೆಸಿತು.
ಕೆಆರ್‌ಎಸ್ ರಸ್ತೆಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಕರ್ತವ್ಯ ಎಂಬ ಹೆಸರಿನ ಈ ಜಾಥಾಗೆ ಡಿಸಿಪಿ ಬಸವರಾಜ ವೈ. ಮಾಲಗತ್ತಿ ಚಾಲನೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಕೃಷ್ಣ ಬೆಂಗೇರ, ಶಿಕ್ಷಕರಾದ ಸುನಿತಾ ದುಕ್ಕಲ್, ಪ್ರಶಾಂತ್ ಮತ್ತಿತರರಿದ್ದರು.
ಸಂಚಾರ ನಿಯಮ ಪಾಲಿಸಿ ಅನಾಹುತ ತಪ್ಪಿಸಿ, ವಾಹನ ಸವಾರಿ ವೇಳೆ ಮೊಬೈಲ್ ಬಳಸಬೇಡಿ, ಹಸಿರು ದೀಪ ಬಂದಾಗ ಸಾಗಿರಿ, ನಿಮ್ಮ ಸುರಕ್ಷತೆ ನಮ್ಮ ಆಶಯ, ಸಂಚಾರ ನಿಯಮ ಉಲ್ಲಂಘನೆ ಶಿಕ್ಷಾರ್ಹ, ವೇಗದ ಸಂಚಾರ ಅನಾಹುತಕ್ಕೆ ಕಾರಣ ಈ ಮುಂತಾದ ಘೋಷಣಾ ಫಲಕಗಳೊಂದಿಗೆ ಚಿಣ್ಣರು ಸಾರ್ವಜನಿಕರ ಗಮನ ಸೆಳೆದರು. ಕೆಲವು ಮಕ್ಕಳು ಸಂಚಾರ ನಿಯಮದ ಸೂಚನೆಯ ಚಿತ್ರಗಳನ್ನು ಕೊರಳಲ್ಲಿ ನೇತು ಹಾಕಿಕೊಂಡು ಸಾಗಿದ್ದು ವಿಶೇಷ.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಕವಿತಾ, ಈಗಾಗಲೇ ಶಾಲಾ ಮಕ್ಕಳು ರೆಡಿಯೋ, ಸ್ಟಿಕ್ಕರ್ ತಾಯಾರಿಕೆ, ಕಾರ್ಡ್ ಮೇಕಿಂಗ್ ಹಾಗೂ ವಿವಿಧ ಆಟಗಳ ಮೂಲಕ ರಸ್ತೆಯ ಸುರಕ್ಷತೆ ಅರಿವನ್ನು ನಗರದ ವಿವಿಧ ಭಾಗಗಳಲ್ಲಿ ಮೂಡಿಸಿದ್ದಾರೆ. ಸಂಚಾರಿ ಪೊಲೀಸ್ ಇಲಾಖೆಗೆ ನೆರವಾಗುವ ಸಲವಾಗಿ ಜನರಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಿದೆ ಎಂದರು.
ನಂತರ ಇಲ್ಲಿಂದ ಹೊರಟ ಮೆರವಣಿಗೆಯು ವಿ. ವಿ. ಮೊಹಲ್ಲಾದ ಮೂಲಕ ಎಂ.ಜಿ ರಸ್ತೆಯಲ್ಲಿ ಸಾಗಿ, ಕುವೆಂಪು ವೃತ್ತ ಬಳಿಸಿಕೊಂಡು ಮಾತೃಮಂಡಳಿ ಶಾಲೆಯ ಬಳಿ ಅಂತ್ಯಗೊಂಡಿತು. ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.