ವಿಧಾನಸಭಾ ಚುನಾವಣೆಗೆ ಕಿರು ಕದನ ದಿಕ್ಸೂಚಿ
ಮೈಸೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯು ಅನಿರೀಕ್ಷಿತವಾಗಿ ಬಂದಿದ್ದು, ಇದರ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಭಾರತಿ ಕನ್‌ವೆನ್ಸನ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಜನತಾ ಪಕ್ಷದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಚುನಾವಣೆಯನ್ನು ನಾವು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅನಿರೀಕ್ಷಿತವಾಗಿ ಬಂದಿದೆ. ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಗಲು- ರಾತ್ರಿ ಶ್ರಮಿಸಬೇಕು. ಈ ಚುನಾವಣೆಯ ಫಲಿತಾಂಶವು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂಬುದನ್ನು ಯಾರು ಮರೆಯಬಾರದು ಎಂದರು. ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಎಚ್.ಸಿ. ಬಸವರಾಜು, ಡಾ.ಎನ್.ಎಲ್. ಭಾರತಿಶಂಕರ್, ಕೆಜೆಪಿ ಜಿಲ್ಲಾಧ್ಯಕ್ಷ ಬಿ.ಎಂ. ರಾಮು, ರಾಜ್ಯ ಕಾರ್ಯದರ್ಶಿ ಕಾ.ಪು. ಸಿದ್ದಲಿಂಗಸ್ವಾಮಿ, ಮುಖಂಡರಾದ ಪುಟ್ಟುಬುದ್ದಿ, ಎಸ್. ಜಯಪ್ರಕಾಶ್, ಎನ್.ವಿ. ಪಣೀಶ್, ಎಂ.ಜಿ. ರಾಮಕೃಷ್ಣಪ್ಪ, ಎಚ್.ವಿ. ರಾಜೀವ್, ಅಪ್ಪಣ್ಣ, ಚಾಮರಾಜನಗರದ ಮಲ್ಲೇಶ್, ಎಸ್. ಅರುಣ್‌ಕುಮಾರ್, ವೀಣಾ ಮೊದಲಾದವರು ಇದ್ದರು.