ಆಯುರ್ವೇದ ಚಿಕಿತ್ಸೆ ಕಡೆ ಒಲವು
ಪಿರಿಯಾಪಟ್ಟಣ: ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆಯೆಡೆಗೆ ಹೆಚ್ಚಿನ ಜನರು ಆಕರ್ಷಿತರಾಗುತ್ತಿದ್ದಾರೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ತ್ರಿವೇಣಿ ಹೇಳಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಪಂ ಹಾಗೂ ಆಯುಷ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ಔಷಧಿಗಳಲ್ಲಿ ಕೆಲವೊಂದನ್ನು ಮನೆಯಲ್ಲಿಯೆ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಸಣ್ಣ- ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆ ಸುತ್ತುವುದು ತಪ್ಪುತ್ತದೆ. ಸಾರ್ವಜನಿಕರು ಆರೋಗ್ಯ ಇಲಾಖೆ ವತಿಯಿಂದ ದೊರೆಯುವ ಸವಲತ್ತು ಬಳಸಿಕೊಳ್ಳುವಂತೆ ತಿಳಿಸಿದರು.
ಮೈಸೂರಿನ ಆಯುರ್ವೇದ ತಜ್ಞ ಡಾ. ಉಮಾ ಕೆ. ಕುಮಾರ್ ಮಾತನಾಡಿದರು. ಡಾ.ಎಂ.ಕೆ. ಸುರೇಶ್, ಡಾ. ನೂರ್‌ಅಹಮ್ಮದ್, ಡಾ. ಜ್ಯೋತಿ, ಡಾ. ಶೋಭಾ, ಡಾ. ತಬೀನಾಬಾನು, ಹಿರಿಯ ಆರೋಗ್ಯ ಮೇಲ್ವಿಚಾರಕ ವಿ.ಆರ್. ಹೆಗ್ಡೆ ಇದ್ದರು.