ಕೆಜೆಪಿ ಆಕಾಂಕ್ಷಿಗಳಿಗೆ ಸೂಚನೆ
ಪಿರಿಯಾಪಟ್ಟಣ: ಕೆಜೆಪಿ ವತಿಯಿಂದ ಪಪಂಗೆ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳು ಅರ್ಜಿಯನ್ನು ಪಕ್ಷದ ಕಚೇರಿಯಲ್ಲಿ ಸಲ್ಲಿಸುವಂತೆ ಪಕ್ಷದ ತಾ. ಅಧ್ಯಕ್ಷ ಎಲ್. ಲಕ್ಷ್ಮಿನಾರಾಯಣ್ ಹೇಳಿದ್ದಾರೆ. ಪಪಂ ಚುನಾವಣೆಗೆ ಪಕ್ಷದ ವತಿಯಿಂದ ಸ್ಪರ್ಧಿಸಲು ಇಚ್ಛಿಸುವ ಆಕಾಂಕ್ಷಿಗಳು ಫೆ.18 ರಿಂದ 20 ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 4 ರೊಳಗೆ ಪಕ್ಷದ ಕಚೇರಿಗೆ ಖುದ್ದು ಹಾಜರಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಫೆ. 20 ರಂದು ಪಕ್ಷದ ವತಿಯಿಂದ ಸಭೆ ನಡೆಸಿ ಅರ್ಜಿದಾರರೊಂದಿಗೆ ಚರ್ಚಿಸಿ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು, ಮೊ. 9590809797.
ಅರ್ಜಿ ಆಹ್ವಾನ
ಎಚ್.ಡಿ. ಕೋಟೆ: ಪಟ್ಟಣದ ಆದರ್ಶ ವಿದ್ಯಾಲಯಕ್ಕೆ 2013- 14ನೇ ಸಾಲಿನ 6ನೇ ತರಗತಿಗೆ ಪ್ರವೇಶ ಬಯಸುವವರಿಗಾಗಿ ಅರ್ಜಿ ವಿತರಿಸಲಾಗುತ್ತಿದ್ದು, ಆಸಕ್ತರು ಆದರ್ಶ ವಿದ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದುಕೊಂಡು ಫೆ. 26 ರೊಳಗೆ ಭರ್ತಿ ಮಾಡಿ ಸಲ್ಲಿಸುವದು. ಮಾ. 24 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಬಿಇಒ ಮಂಜುನಾಥ್ ತಿಳಿಸಿದ್ದಾರೆ.
ಕರು ಸಾವು
ಪಿರಿಯಾಪಟ್ಟಣ: ಚಿರತೆ ದಾಳಿಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕರು ಶನಿವಾರ ಮೃತಪಟ್ಟಿದೆ. ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಚಿರತೆ ದಾಳಿಗೊಳಗಾಗಿ ತೀವ್ರ ಸ್ವರೂಪದ ಗಾಯಗಳಿಂದ ಬಳಲುತ್ತಿದ್ದ ಕರು ಮೃತಪಟ್ಟಿದೆ.
ಜೂಜು: ಬಂಧನ
ಹುಣಸೂರು: ಗ್ರಾಮಾಂತರ ಪೊಲೀಸರು ತಾಲೂಕಿನ ಹನಗೋಡು, ಗಾವಡಗೆರೆ ಹಾಗೂ ಹೊಸವಾರಂಚಿಗಳಲ್ಲಿ ಪ್ರತ್ಯೇಕವಾಗಿ ಇಸ್ಪಿಟ್ ಅಡ್ಡೆಗಳ ಮೇಲೆ ದಾಳಿ ನಡೆಸಿ 18 ಮಂದಿಯನ್ನು ಬಂಧಿಸಿ, ಆಟಕ್ಕೆ ಬಳಸಿದ್ದ ಒಟು 7,220 ವಶಪಡಿಸಿಕೊಂಡಿದ್ದಾರೆ. ಹನಗೋಡಿನ ಕಾಲುವೆ ಪಕ್ಕದ ಜಮೀನಿನಲ್ಲಿ ಆಟವಾಡುತ್ತಿದ್ದಾಗ 6 ಮಂದಿಯನ್ನು ಬಂಧಿಸಿ ಪಣಕೊಡ್ಡಿದ್ದ 520 ಹಾಗೂ ಗಾವಡಗೆರೆಯ ಸರ್ಕಾರಿ ಪ್ರೌಢಶಾಲೆ ಪಕ್ಕದ ಶಿವಾಜಿರಾವ್ ಕದಂ ಅವರ ಜಮೀನಿನಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ಬಂಧಿಸಿ 6250 ಮತ್ತು ಹೊಸವಾರಂಚಿಯ ಶಾಲಾ ಹಿಂಭಾಗ ಆಟವಾಡುತ್ತಿದ್ದ 5 ಮಂದಿಯಿಂದ 450 ವಶಪಡಿಸಿಕೊಂಡು ಎಲ್ಲಾ ಜೂಜುಕೋರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಐ ಅರುಣ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಹದೇವಪ್ಪ, ಉಮೇಶ್, ರಾಮಚಂದ್ರ, ಅಸ್ಲಾಂ ಪಾಷ, ಮೋಹನ್ ಇದ್ದರು.