ಚಿತ್ರ ಕಲಾವಿದ ಹಿರೇಗೌಡರ್ ನಿಧನ
ಮೈಸೂರು: ಹೆಸರಾಂತ ಚಿತ್ರ ಕಲಾವಿದ ಹಾಗೂ ಪ್ರತಿಷ್ಠಿತ ವೆಂಕಟಪ್ಪ ಪ್ರಶಸ್ತಿಗೆ ಭಾಜನರಾಗಿದ್ದ ಪ್ರೊ. ವಿ.ಬಿ. ಹಿರೇಗೌಡರ್ ಭಾನುವಾರ ನಿಧನರಾದರು. ಮೂಲತಃ ಧಾರವಾಡ ಜಿಲ್ಲೆಯ ಗುಡಗೇರಿಯವರಾದ ಇವರು ಕಲಾ ಶಿಕ್ಷರಾಗಿ, ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮೈಸೂರಿನ ವಿಜಯನಗರದ ಡಿ.ಎಂ.ಎಸ್. ಲಲಿತ ಕಲಾ ಮಹಾವಿದ್ಯಾಲಯದ ಗೌರವ ಮುಖ್ಯಸ್ಥರಾಗಿದ್ದರು. 70 ವರ್ಷ ವಯಸ್ಸಿನ ಇವರು ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ಶಿಷ್ಯರಿಗೆ ಮಾರ್ಗದರ್ಶಕರಾಗಿದ್ದರು. ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗೆ ಗಳಿಸಿದ್ದ ಇವರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರತಿಷ್ಠಿತ ವೆಂಕಟಪ್ಪ ಪ್ರಶಸ್ತಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದ ಇವರು ಭಾನುವಾರ ಬೆಳಗ್ಗೆ ನಿಧನರಾದರು. ಪತ್ನಿ, ಪುತ್ರ ಸೇರದಂತೆ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಸಂಸ್ಕಾರವು ದಾವಣಗೆರೆಯಲ್ಲಿ ನಡೆಯಲಿದೆ.