ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೇವೇಗೌಡರಿಗೆ ಯಾವಾಗಲೂ ಸ್ವಹಿತಾಸಕ್ತಿ ಮುಖ್ಯ

Parashurama
Updated On : 17 Feb 2013, 11:36 am

ಪಿರಿಯಾಪಟ್ಟಣ: ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ನಾನು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವುದು ಸತ್ಯವೇ ಹೊರತು ಸುಳ್ಳಲ್ಲ ಎಂದು ಶಾಸಕ ಕೆ. ವೆಂಕಟೇಶ್ ಸ್ಪಷ್ಟಪಡಿಸಿದರು.
ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಗ್ರಾಪಂ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಿಂದಿನಿಂದಲೂ ತಮ್ಮ ಕುಟುಂಬಕ್ಕೊಸ್ಕರವೇ ರಾಜಕೀಯ ಮಾಡುತ್ತಾ ಬಂದಿದ್ದಾರೆ. ಅವರ ಹೋರಾಟ ಕೇವಲ ಅವರ ಕುಟುಂಬಕ್ಕಾಗಿ ಮಾತ್ರ. ತಾವು ಸಹ ಅವರನ್ನು ಬಿಟ್ಟು ಬರಲು ಅದೇ ಕಾರಣ. ಅವರಿಗೆ ಬೇಕಾದವರನ್ನು ಮಾತ್ರ ಮಂತ್ರಿ ಮಾಡುವ ಸ್ವಭಾವ ಹೊಂದಿರುವ ಅವರು, ತಮ್ಮ ಕುಟುಂಬ ಹಾಗೂ ಬಂಡವಾಳಶಾಹಿ ಮತ್ತು ಶ್ರೀಮಂತರನ್ನು ಬಿಟ್ಟರೆ ಮತ್ಯಾರಿಗೂ ರಾಜಕೀಯವಾಗಿ ಬೆಳೆಯಲು ಅವಕಾಶ ನೀಡಲಿಲ್ಲ, ಅಧಿಕಾರ ಕೊಡಲಿಲ್ಲ. ಹೀಗಾಗಿಯೇ ಅವರನ್ನು ಬಿಟ್ಟು ಬರಬೇಕಾಯಿತು ಎಂದು ತಿಳಿಸಿದರು.
ಜಿಲ್ಲಾ ಅಧ್ಯಕ್ಷ ಧರ್ಮಸೇನ, ಜಿಪಂ ಸದಸ್ಯೆ ಮಂಜುಳಾರಾಜ್, ಎಪಿಎಂಸಿ ಅಧ್ಯಕ್ಷ ಎಸ್.ಟಿ. ರಾಜಶೇಖರ್, ಪಪಂ ಮಾಜಿ ಅಧ್ಯಕ್ಷ ಪಿ.ಎಸ್. ವಿಷಕಂಠಯ್ಯ, ಎಪಿಎಂಸಿ ಸದಸ್ಯ ಹೊಲದಪ್ಪ ಮಾತನಾಡಿದರು. ಗ್ರಾಪಂ ಹಾಗೂ ಮತ್ತಿತರ ಸಂಘ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು.
ಸೇರ್ಪಡೆ: ತಾಲೂಕಿನ ವಿವಿಧ ಗ್ರಾಪಂಗಳ ಜೆಡಿಎಸ್ ಬೆಂಬಲಿತ ಕೆಲ ಸದಸ್ಯರು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಜೆಡಿಎಸ್, ಬಿಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳ ಹಲವಾರು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಜಿಪಂ ಸದಸ್ಯೆ ಕಾವೇರಿ ಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಪುಟ್ಟರಾಜು, ತಾಪಂ ಸದಸ್ಯರಾದ ಬಿ.ವಿ. ಅನಿತಾ, ಸರಸ್ವತಿ, ರಾಜೇಶ್ವರಿ, ಸಾಕಮ್ಮ, ಚಂದ್ರು, ಮಹದೇವ್, ಸುಪ್ರಭಾ, ಪಪಂ ಮಾಜಿ ಅಧ್ಯಕ್ಷರಾದ ಪಿ.ಎಂ. ಶಾಂತಪ್ಪ, ವೆಂಕಟಯ್ಯ, ಸದಸ್ಯ ಪಿ.ಎಂ. ಚನ್ನಬಸವರಾಜು, ಕಾಂಗ್ರೆಸ್ ಪದಾಧಿಕಾರಿಗಳಾದ ಮಾನ್ಸೂನ್‌ಚಂದ್ರು, ಕುಂಜಪ್ಪ ಕಾರ್ನಾಡ್, ಪ್ರಶಾಂತ್‌ಗೌಡ, ಜಯಣ್ಣ, ಡಾ.ಬಿ.ಜೆ. ವಿಜಯ್‌ಕುಮಾರ್, ಬಿ.ಜೆ. ಬಸವರಾಜ್, ಮಹಮ್ಮದ್‌ಶಫಿ, ಮಾನು ಇದ್ದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement