ಪುಸ್ತಕ ಸಂಸ್ಕೃತಿ ಬೆಳೆಸಿ: ಡಾ. ಚಿದಾನಂದಗೌಡ
ಮೈಸೂರು: ಜ್ಞಾನ ಹೆಚ್ಚಿಸುವ ಪುಸ್ತಕ ಓದುವ ಮೂಲಕ ಎಲ್ಲರೂ ಪುಸ್ತಕ ಸಂಸ್ಕೃತಿ ಬೆಳೆಸಬೇಕಾಗಿದೆ ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಹೇಳಿದರು.
ಮೈಸೂರಿನ ಲೇಖಕಿಯರ ಸ್ನೇಹ ಬಳಗವು ಕೃಷ್ಣಮೂರ್ತಿಪುರಂ ವನಿತಾ ಸದನದಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ಕಥಾ ಸಂಪುಟಗಳು ಹಾಗೂ ಕವನಗುಚ್ಛ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆ ತಾಳೆಗರಿಗಳಲ್ಲಿ ಬರೆಯಲಾಗುತ್ತಿತ್ತು. ಬಳಿಕ ಪುಸ್ತಕಗಳು ಬಂದವು. ಪ್ರಸ್ತುತ ಎಲ್ಲವೂ ಸಿಡಿಮಯವಾಗುತ್ತಿದೆ. ಪುಸ್ತಕ ಸಂಸ್ಕೃತಿ ಹೋಗಿ ಸಿಡಿ ಸಂಸ್ಕೃತಿ ಬೆಳೆಯುತ್ತಿದೆ ಎಂದು ವಿಷಾದಿಸಿದರು.
ನಿವೃತ್ತ ಶಿಕ್ಷಕ ನಜೀರ್ ಅಹಮದ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿರಿಯರ ಬಗ್ಗೆ ಮಕ್ಕಳಲ್ಲಿ ಗೌರವ ಕಡಿಮೆ ಆಗುತ್ತಿದ್ದು, ಪೋಷಕರ ಪ್ರೀತಿಯಿಂದ ಮಕ್ಕಳು ದೂರವಾಗುತ್ತಿದ್ದಾರೆ. ಕೇವಲ ಶಾಲೆ, ಮನೆ, ಹೋಂ ವರ್ಕ್ಗಳಲ್ಲೇ ಕಾಲ ದೂಡುತ್ತಿರುವ ಮಕ್ಕಳಿಗೆ, ಹೆತ್ತವರ ಪ್ರೀತಿ ವಾತ್ಸಲ್ಯ ದೊರೆಯುತ್ತಿಲ್ಲ. ಮೊಬೈಲ್, ಇಂಟರ್ನೆಟ್, ಟಿವಿಗಳಿಗೆ ಮಕ್ಕಳು ಮಾರು ಹೋಗುತ್ತಿದ್ದಾರೆ. ಇದರಿಂದ ಅವರ ಭವಿಷ್ಯ ಮಸುಕಾಗುವಂತಾಗಿದೆ ಎಂದರು.
42 ಲೇಖಕಿಯರು ಬರೆದಿರುವ ಮಕ್ಕಳ ಕಥಾ ಪ್ರಪಂಚ ಪುಸ್ತಕವನ್ನು ರಂಗಕರ್ಮಿ ಡಾ.ಎಚ್.ಕೆ. ರಾಮನಾಥ್, 42 ಲೇಖಕಿಯರು ಬರೆದ ಮಕ್ಕಳ ಮೋಜಿನ ಕಥೆಗಳು ಪುಸ್ತಕವನ್ನು ಸುರುಚಿ ರಂಗಮನೆಯ ವಿಜಯಾ ಸಿಂಧುವಳ್ಳಿ, 80 ಕವಯಿತ್ರಿಯರ ಕವನಗುಚ್ಛ ಕೃತಿಯನ್ನು ಡಾ. ಅನುಸೂಯದೇವಿ ಬಿಡುಗಡೆಗೊಳಿಸಿದರು.
ತಾರಿಣಿ ಚಿದಾನಂದಗೌಡ ಅಧ್ಯಕ್ಷತೆ ವಹಿಸಿದ್ದರು. ಗೀತಾಂಜಲಿ ಪ್ರಕಾಶನದ ನಿಡಸಾಲೆ ಪುಟ್ಟಸ್ವಾಮಯ್ಯ, ಜಾಗೃತಿ ಪ್ರಿಂಟರ್ಸ್ನ ವಿಜಯ್ ನಿಡಸಾಲೆ, ಲೇಖಕಿಯರ ಸ್ನೇಹ ಬಳಗದ ಸಿ.ಎನ್. ಮುಕ್ತಾ, ಬಿ.ಆರ್. ನಾಗರತ್ನ ಇದ್ದರು. ಸವಿತಾ ಪ್ರಭಾಕರ್ ಸ್ವಾಗತಿಸಿದರು.