ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಸ್ಥೆ ನವೀಕರಣ ನೆಪದಲ್ಲಿ ಪಾರಂಪರಿಕ ಕಟ್ಟಡ ವಿರೂಪ

Parashurama
Updated On : 17 Feb 2013, 11:39 am

ಮೈಸೂರು: ಮೈಸೂರಿನಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಇರುವುದು ಪಾರಂಪರಿಕ ಕಟ್ಟಡದಲ್ಲಿ. ನವೀಕರಣದ ಹೆಸರಿನಲ್ಲಿ ಈ ಪಾರಂಪರಿಕ ಕಟ್ಟಡದ ಸ್ವರೂಪಕ್ಕೆ ಧಕ್ಕೆ ತರುವ ಕೆಲಸ ನಡೆದಿದೆ.
ಉಲ್ಲಂಘನೆ: ಕಟ್ಟಡದ ಮೊದಲ ಮಹಡಿಯ ಆಗ್ನೇಯ ಮೂಲೆಯಲ್ಲಿ ಈಗಾಗಲೇ ಇದ್ದ ಫ್ಲೋರಿಂಗ್ ಅನ್ನು ತೆಗೆದು ವೆಟ್ರಿಫೈಡ್ ಟೈಲ್ಸ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಶೌಚಾಲಯಗಳ ನವೀಕರಣ ಕೂಡ ಮಾಡಲಾಗಿದೆ. ಇದಕ್ಕೆ ಮಾಡಿರುವ ವೆಚ್ಚ 18 ಲಕ್ಷ. ಈ ಕಾಮಗಾರಿಗೆ ಮುನ್ನಾ ಪತ್ರಿಕೆಗಳಲ್ಲಿ ಟೆಂಡರ್ ಆಹ್ವಾನಿಸಬೇಕಿತ್ತು. ಆದರೆ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ನಿಯಮಾವಳಿ ಉಲ್ಲಂಘಿಸಿದ್ದಾರೆ. ಅಲ್ಪಾವಧಿ ಟೆಂಡರ್ ಕರೆದು ಗೊತ್ತಿರುವ ಗುತ್ತಿಗೆದಾರನಿಗೆ ಈ ಕಾಮಗಾರಿ ನೀಡಿದ್ದರು.
ಛಾವಣಿ ಬಿರುಕು: ನವೀಕರಣ ಕಾಮಗಾರಿ ನಡೆಸುವಾಗ ಪಾರಂಪರಿಕ ಪ್ಲಂಬಿಂಗ್ ಮತ್ತು ವಿದ್ಯುತ್ ಉಪಕರಣ ಸಂರಕ್ಷಿಸುವ ಗೋಜಿಗೂ ಹೋಗಿಲ್ಲ. ಕೊಠಡಿಯ ಬಣ್ಣ ಕೂಡ ಬದಲಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದರಿಂದ ಆರ್‌ಸಿಸಿ ಸ್ಲಾಬ್‌ಗಳಿಗೆ ಧಕ್ಕೆಯಾಗಿ, ನೀರು ಸೋರಿಕೆಯಾಗಿ ನೆಲ ಅಂತಸ್ತಿನ ಛಾವಣಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಇದೇ ಗುತ್ತಿಗೆದಾರನಿಗೆ 8 ಲಕ್ಷ ಮತ್ತೊಂದು ಕಾಮಗಾರಿಯನ್ನು ನೀಡಲಾಗಿತ್ತು. ಆಗಲೂ ಟೆಂಡರ್ ಕರೆದಿಲ್ಲ. ಅಂತಿಮವಾಗಿ ಈ ಕಾಮಗಾರಿಯ ಮೊತ್ತ 12 ಲಕ್ಷ ಆಗಿದೆ. ವಾಯವ್ಯ ಮೂಲೆಯಲ್ಲಿ 9.50 ಲಕ್ಷ ವೆಚ್ಚದಲ್ಲಿ ಮತ್ತೊಂದು ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಹಲವಾರು ಗುತ್ತಿಗೆದಾರರು ಅರ್ಜಿ ಹಾಕಿದ್ದಾರೆ.

ಅರಮನೆ ಇತಿಹಾಸ
ರಾಜಕುಮಾರಿ ಚೆಲುವಾಜಮ್ಮಣ್ಣಿ ಅವರಿಗಾಗಿ ಈ ಅರಮನೆಯನ್ನು 1905 ರಲ್ಲಿ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದರು. ಹೀಗಾಗಿ ಇದಕ್ಕೆ ಚೆಲುವಾಂಬ ಮ್ಯಾನ್ಸನ್ ಎಂಬ ಹೆಸರಿದೆ. ಸ್ವಾತಂತ್ರ್ಯ ನಂತರ ಮೈಸೂರಿನಲ್ಲಿ ಸಿಎಫ್‌ಟಿಆರ್‌ಐ ಆರಂಭಿಸಲು ಮುಂದಾದಾಗ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಕಟ್ಟಡವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದರು. ಸುಮಾರು 135 ಎಕರೆಯಷ್ಟು ಪ್ರದೇಶದಲ್ಲಿ ಈ ಸುಂದರ ಹಾಗೂ ಭವ್ಯ ಕಟ್ಟಡ ತನ್ನ ಪಾರಂಪರಿಕ ಚೆಲುವನ್ನು ಸಾರುತ್ತಾ ನಿಂತಿದೆ. ಇಂತಹ ಕಟ್ಟಡದ ಸೌಂದರ್ಯಕ್ಕೆ ಮಾರಕವಾಗುವಂತೆ ನವೀಕರಣ ಕಾಮಗಾರಿ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸಂಬಂಧಪಟ್ಟವರು ಆಲೋಚಿಸಬೇಕಿದೆ.
-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement