ಆರ್ಟಿಐ ದುರುಪಯೋಗಕ್ಕೆ ಶಿಕ್ಷೆಯಾಗಲಿ
ಮೈಸೂರು: ಮಾಹಿತಿ ಹಕ್ಕು ಕಾಯ್ದೆ ದುರುಪಯೋಗಪಡಿಸಿಕೊಳ್ಳುವವರಿಗೆ ಶಿಕ್ಷೆ ವಿಧಿಸಲು ಮುಂದಾಗಬೇಕು ಎಂದು ಹಿರಿಯ ಸಾಹಿತಿ ಡಾ.ಸಿಪಿಕೆ ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಹಿತಿ ಹಕ್ಕು ಮತ್ತು ಮಾಧ್ಯಮ ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ಭಾನುವಾರ ಅವರು ಮಾತನಾಡಿದರು.
ಮಾಹಿತಿ ನಿರಾಕರಿಸಿದರೆ ಶಿಕ್ಷೆ ವಿಧಿಸಲಾಗುತ್ತದೆ. ಅಂತೆಯೇ ಮಾಹಿತಿ ಕೇಳುವವರು ತಪ್ಪು ಮಾಡಿದರೆ ಶಿಕ್ಷೆ ವಿಧಿಸುವ ಕೆಲಸ ಆಗಬೇಕು. ಈಗಾಗಲೇ ಸಾರ್ವಜನಿಕ ಹಿತಾಸ್ತಕಿ ಮೊಕದ್ದಮೆ ದಾಖಲಿಸುವ ಅರ್ಜಿದಾರರು ಲೋಪವೆಸಗಿದರೆ ದಂಡ ವಿಧಿಸುವ ಅವಕಾಶ ಕಲ್ಪಿಸಿದೆ ಎಂದರು.
ಪ್ರಜೆಗಳ ಸಹಭಾಗಿತ್ವವಿಲ್ಲದೆ ಸಾಗುವ ಏಕಮುಖ ಪ್ರಭುತ್ವ ಅಪಾಯಕಾರಿ. ಎರಡು ಮುಖಗಳನ್ನು ಹೊಂದಿರುವ ಪ್ರಜಾಪ್ರಭುತ್ವದ ಬೆಳವಣಿಗೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಸಾಧನ ಎಂದರು.
ಸಾಹಿತಿ ಡಾ.ಸಿಪಿಕೆ ಅವರನ್ನು ಗೌರವಿಸಲಾಯಿತು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಹಮೀದ್ ಖಾನ್, ಸದಸ್ಯ ಅಂಶಿ ಪ್ರಸನ್ನ ಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ಕೆ. ದೀಪಕ್ ಇದ್ದರು. ರಾಘವೇಂದ್ರ ನಿರೂಪಿಸಿದರು.