ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಕುಂಬಾರ ಮಂಡಳಿ: ಸಿದ್ದರಾಮಯ್ಯ
ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ರಾಜ್ಯಮಟ್ಟದ ಕುಂಬಾರ ಮಂಡಳಿ ಸ್ಥಾಪನೆ ಮಾಡಿ ಅದಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ಇಲ್ಲಿನ ನಾದಬ್ರಹ್ಮ ಸಂಗೀತಸಭಾ ಭವನದಲ್ಲಿ ಭಾನುವಾರ ಜಿಲ್ಲಾ ಕುಂಬಾರರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.38, ದೇಶದಲ್ಲಿ ಶೇ.52 ರಷ್ಟು ಹಿಂದುಳಿದ ಜನಾಂಗದವರಿದ್ದರೂ ಸಹ ಸಂಘಟನೆ ಕೊರತೆಯಿಂದ ನಮಗೆ ಸಿಗಬೇಕಾದ ಶಿಕ್ಷಣ, ಸಾಮಾಜಿಕ ರಾಜಕೀಯದಲ್ಲಿ ಪಾಲು ಸಿಕ್ಕಿಲ್ಲ. ಕುಂಬಾರಿಕೆ ನಶಿಸಿ ಹೋಗುತ್ತಿದ್ದು, ಪುನರುಜ್ಜೀವನಗೊಳಿಸಬೇಕಾಗಿದೆ. ರಾಜ್ಯದಲ್ಲಿ ಚದುರಿ ಹೋಗಿರುವ ಕುಂಬಾರ ಜನಾಂಗದವರು ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆದು ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮಹಾಕಾವ್ಯಗಳನ್ನು ಬರೆದ ವ್ಯಾಸ, ವಾಲ್ಮೀಕಿ, ಕನಕದಾಸ, ಕಾಳಿದಾಸ, ಸರ್ವಜ್ಞ ಎಲ್ಲರೂ ಕೆಳವರ್ಗದಲ್ಲಿ ಹುಟ್ಟಿದವರು, ಹಿಂದುಳಿದವರು. ಸ್ವಾಭಿಮಾನಿಗಳಾಗಿ, ಬುದ್ಧಿವಂತರಾಗಿ, ವಿಚಾರವಂತರಾಗಿ ಇರಬೇಕಾದರೆ ವಿದ್ಯೆ ಕಲಿಯಲೇಬೇಕು. ಕುಂಬಾರ ಜನಾಂಗ ನ್ಯಾಯಯುತ ಪಾಲನ್ನು ಪಡೆಯಲು ನನ್ನ ಸಂಪೂರ್ಣ ಬೆಂಬಲವಿರುವುದಾಗಿ ಅವರು ಹೇಳಿದರು. ಶ್ರೀ ನಾಗನಂದ ಸ್ವಾಮೀಜಿ, ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷ ಕೆ.ಸಿ. ಶಿವಕುಮಾರ್, ಚೌಡಶೆಟ್ಟಿ, ಜಿಲ್ಲಾ ಅಧ್ಯಕ್ಷ ನಾಗಣ್ಣ, ಕೆ.ಮರೀಗೌಡ, ಹಿನಕಲ್ ಪ್ರಕಾಶ್, ಜವರೇಗೌಡ, ಮಹದೇವ, ಬಸಪ್ಪ, ಕೃಷ್ಣಕುಮಾರ್, ಸಾಗರ್, ಕೆಂಚಪ್ಪ, ಕೃಷ್ಣ, ಶಶಿಕಲಾ ಶಿವಕುಮಾರ್, ತಿಮ್ಮಶೆಟ್ಟಿ, ಟಿ.ಎಲ್. ನಾಗರಾಜು, ಚಿಕ್ಕಸ್ವಾಮಿ, ಎಂ. ಕುಮಾರ, ಆರ್. ರಂಗಸ್ವಾಮಿ, ಎಸ್. ಕುಮಾರ್, ಎಂ.ಸಿ. ಹೇಮಾವತಿ, ವಿ. ರಂಗಸ್ವಾಮಿ ಇದ್ದರು.