ಕುಂಭ ಮೇಳದಲ್ಲಿ ಧಾರ್ಮಿಕ ಸಿಂಚನ
ಮೈಸೂರು: ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕು ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಆರಂಭವಾಗಿರುವ ಒಂಬತ್ತನೆಯ ಮಹಾ ಕುಂಭಮೇಳದ 2ನೇ ದಿನವಾದ ಭಾನುವಾರ ಧಾರ್ಮಿಕ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಮಠಾಧೀಶರು ಆಶೀರ್ವಚನ ಹಾಗೂ ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಉಪನ್ಯಾಸ ನೀಡಿದ ಬೆಂಗಳೂರು ಆಕಾಶವಾಣಿ ಸುದ್ದಿ ಸಂಪಾದಕಿ ಡಾ.ಟಿ.ಸಿ. ಪೂರ್ಣಿಮಾ, ಮಾನವನ ನೈತಿಕತೆ ಅಧಃಪತನ ಆಗುತ್ತಿದೆ. ಹೀಗಾಗಿ, ಮೌಲ್ಯವರ್ಧಿತ ಧರ್ಮ ಬರಬೇಕು. ಎಲ್ಲವನ್ನು ಮೀರಿ ಮನೋಭಾವ ಧರ್ಮ ಅರಳಬೇಕು. ಮನೋವ್ಯಾಪಾರಿಯನ್ನು ನಿಯಂತ್ರಿಸಬೇಕು. ಸಮಾಜ ನಿರ್ಮಾಣ ಕೆಲಸಕ್ಕಾಗಿ ಮೌಲ್ಯವರ್ಧಿತ ಧರ್ಮ ರೂಪಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಕೆ.ಆರ್. ನಗರ ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಮಾನವ ಜನ್ಮ ದೊಡ್ಡದು, ಅತೀ ಶ್ರೇಷ್ಠವಾದದ್ದು. ಕುಂಭ ಎಂದರೆ ಕೊಡ. ಮನುಷ್ಯನ ದೇಹವೇ ಆ ಕೊಡ. ಕುಂಭ ಮೇಳದ ಮೂಲಕ ಮನುಷ್ಯನ ದೇಹವನ್ನು ಪುಣ್ಯಸ್ನಾನದಿಂದ ಶುದ್ಧೀಕರಿಸಬೇಕು ಎಂದರು.
ಸನ್ಮಾನ: ಇದೇ ವೇಳೆ ನಂಜನಗೂಡು ತಹಸೀಲ್ದಾರ್ ಪ್ರಿಯದರ್ಶಿನಿ, ಎಸ್ಪಿ ಆರ್. ದಿಲೀಪ್, ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್‌ರೆಡ್ಡಿ, ಡಿವೈಎಸ್ಪಿ ಎಸ್.ಜಿ. ವಿಜಯಕುಮಾರ್, ಸಿಪಿಐ ಸುಂದರ್‌ರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾರದಾ ವಿಲಾಸ ಕಾನೂನು ಕಾಲೇಜು ಪ್ರಾಧ್ಯಾಪಕಿ ವಿಮಲಶ್ರೀ ಉಪನ್ಯಾಸ ನೀಡಿದರು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ರಾಮರೂಢ ಮಠದ ಶಂಕರರೂಢ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಬೈರಾಪುರ ಗ್ರಾಪಂ ಅಧ್ಯಕ್ಷೆ ಪದ್ಮಾ ವೆಂಕಟೇಶ್, ಉಪಾಧ್ಯಕ್ಷ ಪುಟ್ಟು, ಜಿಪಂ ಸದಸ್ಯೆ ರೇಣುಕಾ ನಾಗರಾಜು, ಸ್ಥಳೀಯ ಜನಪ್ರತಿನಿಧಿಗಳಾದ ನಂಜುಂಡಸ್ವಾಮಿ, ರಾಚಯ್ಯ, ದಿವಾಕರ, ರಾಚೇಗೌಡ ಮೊದಲಾದವರು ಇದ್ದರು.