ಕುಂಭ ಮೇಳದಲ್ಲಿ ಧಾರ್ಮಿಕ ಸಿಂಚನ
ಮೈಸೂರು: ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕು ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಆರಂಭವಾಗಿರುವ ಒಂಬತ್ತನೆಯ ಮಹಾ ಕುಂಭಮೇಳದ 2ನೇ ದಿನವಾದ ಭಾನುವಾರ ಧಾರ್ಮಿಕ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಮಠಾಧೀಶರು ಆಶೀರ್ವಚನ ಹಾಗೂ ತಜ್ಞರು ಉಪನ್ಯಾಸ ನೀಡಿದರು.
ಉಪನ್ಯಾಸ ನೀಡಿದ ಬೆಂಗಳೂರು ಆಕಾಶವಾಣಿ ಸುದ್ದಿ ಸಂಪಾದಕಿ ಡಾ.ಟಿ.ಸಿ. ಪೂರ್ಣಿಮಾ, ಮಾನವನ ನೈತಿಕತೆ ಅಧಃಪತನ ಆಗುತ್ತಿದೆ. ಹೀಗಾಗಿ, ಮೌಲ್ಯವರ್ಧಿತ ಧರ್ಮ ಬರಬೇಕು. ಎಲ್ಲವನ್ನು ಮೀರಿ ಮನೋಭಾವ ಧರ್ಮ ಅರಳಬೇಕು. ಮನೋವ್ಯಾಪಾರಿಯನ್ನು ನಿಯಂತ್ರಿಸಬೇಕು. ಸಮಾಜ ನಿರ್ಮಾಣ ಕೆಲಸಕ್ಕಾಗಿ ಮೌಲ್ಯವರ್ಧಿತ ಧರ್ಮ ರೂಪಿಸಿಕೊಳ್ಳಬೇಕಿದೆ ಎಂದರು. ಕೆ.ಆರ್. ನಗರ ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪುಣ್ಯಸ್ನಾನ: ಕುಟುಂಬ ಸಮೇತ ಆಗಮಿಸಿದ್ದ ಹಲವರು ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ಸಂಗಮ ಕ್ಷೇತ್ರದಲ್ಲಿ ಸ್ನಾನ ಮಾಡಿದರು.