ಜೆ.ಕೆ. ಸಂಸ್ಥೆ ಮಾಲೀಕ ಸಿಂಘಾನಿಯಾ ನಿಧನಕ್ಕೆ ಸಂತಾಪ
ಮೈಸೂರು: ದೆಹಲಿಯಲ್ಲಿ ಶನಿವಾರ ನಿಧನರಾದ ಜೆ.ಕೆ ಸಂಸ್ಥೆಯ ಮಾಲೀಕ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಕೈಗಾರಿಕೋದ್ಯಮಿ ಹರಿಶಂಕರ್ ಸಿಂಘಾನಿಯಾ (80) ಅವರಿಗೆ ಇಲ್ಲಿನ ವಿಕ್ರಾಂತ್ ಜೆ.ಕೆ ಟೈರ್ಸ್‌ನ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯು ಭಾನುವಾರ ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಖಾನೆಯ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಶಿವಪ್ಪ ಮಾತನಾಡಿ, ನಮ್ಮ ದೇಶದ ಶ್ರೇಷ್ಠ ಕೈಗಾರಿಕೋದ್ಯಮಿಗಳಾದ ಸಿಂಘಾನಿಯಾ ಅವರು ತಮ್ಮ 15ನೇ ವಯಸ್ಸಿನಲ್ಲಿ ಕೈಗಾರಿಕೆ ಸ್ಥಾಪಿಸಿ ದೇಶ, ವಿದೇಶಗಳಲ್ಲಿ ಪ್ರಖ್ಯಾತಿ ಪಡೆದು ವಿದೇಶದಲ್ಲಿಯೂ ಕೈಗಾರಿಕೆ ಸ್ಥಾಪಿಸಿದ್ದಾರೆ. ಇವರ ನಿಧನದಿಂದ ಜೆ.ಕೆ ಟೈರ್ಸ್ ಹಾಗೂ ಗ್ರೂಪ್‌ನ ಎರಡನೇ ತಲೆಮಾರಿನ ಕೊಂಡಿ ಕಳಚಿಕೊಂಡಿದೆ ಎಂದು ಹೇಳಿದರು. ಜೆ.ಕೆ. ಟೈರ್ಸ್ ರೇಡಿಯಲ್ ಕಾರ್ಖಾನೆಯ ಉಪಾಧ್ಯಕ್ಷ ರಾಜಗೋಪಾಲಯ್ಯ ಮಾತನಾಡಿ, ಸಿಂಘಾನಿಯಾ ಅವರ ಅಪಾರ ಶ್ರಮ ಹಾಗೂ ಕಾರ್ಯವೈಖರಿ ಕಂಡು ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಕಂಬನಿ ಮಿಡಿದರು. ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿದರು. ಕಾರ್ಮಿಕ ಮುಖಂಡರಾದ ಎಸ್. ಅಣ್ಣಯ್ಯ, ಎ.ಟಿ. ಗೋವಿಂದರಾಜು, ಎಲ್.ಆರ್. ಗೋವಿಂದೇಗೌಡ, ಪಿ. ರಾಮಕೃಷ್ಣೇಗೌಡ, ಶ್ರೀನಿವಾಸ್, ಎಂ.ಎಸ್. ಪ್ರಕಾಶ್, ಕೃಷ್ಣ, ಶಂಕರ್, ಮಲ್ಲೇಶ್, ಮಹದೇವಮೂರ್ತಿ, ಜಯಚಂದ್ರ, ಮಾನವ ಸಂಪನ್ಮೂಲಧಿಕಾರಿ ಪ್ರಭುದೇವ್, ನಾಗರಾಜು, ರಕ್ಷಣಾ ಸಿಬ್ಬಂದಿ ಉತ್ತಪ್ಪ, ಕವಡೆ, ಬಸವರಾಜ್ ಇದ್ದರು.