'ಪತ್ರಿಕಾರಂಗದಲ್ಲಿ ಹುಸಿ ಸಂಸ್ಕೃತಿ ಅನಾವರಣ'
ಇಂದು ಪತ್ರಿಕಾ ರಂಗದಲ್ಲಿ ಹುಸಿ ಸಂಸ್ಕೃತಿ ಅನಾವರಣಗೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ವಿಷಾದಿಸಿದರು. ಮಾಹಿತಿ ಹಕ್ಕು ಮತ್ತು ಮಾಧ್ಯಮ ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಪತ್ರಿಕೋದ್ಯಮದ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ಡಿವಿಜಿಯವರು ಪತ್ರಿಕಾ ಧರ್ಮ ಹುಟ್ಟಿ ಹಾಕಿದವರು. ಆದರೆ ಇಂದು ಅಂತಹ ಪತ್ರಿಕಾ ಧರ್ಮ ಹುಡುಕಬೇಕಿದೆ ಎಂದರು. ಆಗಿನ ಕಾಲದಲ್ಲಿ ದೊಡ್ಡ ಸಾಹಿತಿಗಳು ಪತ್ರಿಕಾರಂಗದಲ್ಲಿದ್ದರು. ಹಾಗಾಗಿ ಸುದ್ದಿಗಳಲ್ಲಿ ಸಾಹಿತ್ಯ ಸ್ಪರ್ಶ ಹಾಗೂ ವೃತ್ತಿಯಲ್ಲಿ ಆದರ್ಶ ಕಾಣಬಹುದಾಗಿತ್ತು. ಆದರೆ ಇಂದು ಅವುಗಳು ಮರೆಯಾಗಿವೆ ಎಂದು ತಿಳಿಸಿದರು. ಮುದ್ರಣ ಹಾಗೂ ದೃಶ್ಯ ಮಾಧ್ಯಮಗಲ್ಲಿ ಭಿತ್ತರಿಸುವ ಸುದ್ದಿಯ ಭಾಷಾ ಶೈಲಿ ಬದಲಾಗಿದೆ. ಮಾಧ್ಯಮಗಳಲ್ಲಿ ತಪ್ಪು ಕನ್ನಡದ ಬಳಕೆ ಹೆಚ್ಚಾಗಿದೆ. ಟಿವಿ ಪ್ರಭಾವದಿಂದ ಪತ್ರಿಕೋದ್ಯಮ ಕುಲುಷಿತಗೊಂಡಿದೆ ಎಂದು ಹೇಳಿದರು.
ತರಬೇತಿ ಕಾರ್ಯಕ್ರಮ: ಮಾಹಿತಿ ಹಕ್ಕು ಕಾಯ್ದೆ ಬರುವ ಮುನ್ನವೇ ತನಿಖಾ ವರದಿಗಳ ಮೂಲಕ ಅಕ್ರಮಗಳನ್ನು ಹಾಗೂ ಅವ್ಯವಹಾರಗಳನ್ನು ಬಯಲಿಗೆಳೆಯುವಲ್ಲಿ ಪತ್ರಕರ್ತರು ಮುಂದಾಗಿದ್ದರು. ಆದರೆ ಆರ್‌ಟಿಐ ಬಂದ ಮೇಲೆ ಅದರ ಸದುಪಯೋಗಪಡಿಸಿಕೊಂಡು ಅನೇಕ ಹಗರಣಗಳನ್ನು ಬೆಳಕಿಗೆ ತರುವ ಕೆಲಸ ನಡೆದಿವೆ. ಅಂತೆಯೇ ಕಾಯ್ದೆಯ ದುರಪಯೋಗ ನಡೆದಿರುವುದನ್ನು ಇಲ್ಲವೆನ್ನುವಂತಿಲ್ಲ. ಈ ಕಾಯ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪತ್ರಕರ್ತರಿಗೆ ನೀಡಲು ಸಂಘವು ಅಕಾಡೆಮಿಯೊಂದಿಗೆ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ತರಬೇತಿ ಕಾರ್ಯಕ್ರಗಳನ್ನು ಆಯೋಜಿಸುತ್ತಿದೆ ಎಂದರು. ಪತ್ರಕರ್ತರ ಮೇಲೆ ದೌರ್ಜನ್ಯ, ಹಲ್ಲೆ ಹಾಗೂ ಪತ್ರಿಕಾ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಇದಕ್ಕೆ ಸರವೇಗದ ಸುದ್ದಿ ಸಂಗ್ರಹವೂ ಪ್ರಮುಖ ಕಾರಣ. ಪತ್ರಕರ್ತರಿಗೆ ಕೋಳ ತೊಡಿಸಿ ಬಂಧಿಸುವ ಸಂಪ್ರದಾಯ ಆರಂಭವಾಗಿದೆ. ಪತ್ರಕರ್ತರು ವರದಿಗೆ ಹೋಗುವಾಗ ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿ ಹೋಗಬೇಕು ಎಂಬುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.