ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು: ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಕೆ.ಎಸ್. ರಾಮೇಗೌಡ ಭಾನುವಾರ ಚಾಲನೆ ನೀಡಿದರು.
ಜಯಲಕ್ಷ್ಮೀಪುರಂನ ಹೆರಿಗೆ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ 2ನೇ ಸುತ್ತಿನ ಪಲ್ಸ್ ಪೋಲಿಯೋಗೆ ಚಾಲನೆ ನೀಡಿದರು. ನಗರದಲ್ಲಿ 308 ಪೋಲಿಯೋ ಕೇಂದ್ರ ತೆರೆಯಲಾಗಿದ್ದು, ಅಂದಾಜು ಸುಮಾರು 1,01,758 ಮಕ್ಕಳು ಇದ್ದಾರೆ. ಈ ಪೈಕಿ ಮೊದಲ ಸುತ್ತಿನಲ್ಲಿ 1,02,121 ಮಂದಿ ಮಕ್ಕಳು ಪೋಲಿಯೋ ಹನಿ ಹಾಕಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1558 ಪೋಲಿಯೋ ಹನಿ ವಿತರಣಾ ಕೇಂದ್ರ ತೆರೆಯಲಾಗಿದ್ದು, 3,14,384 ಮಂದಿ ಮಕ್ಕಳಿದ್ದಾರೆ. ಈ ಪೈಕಿ ಕಳೆದ ಬಾರಿ 3,13,270 ಮಕ್ಕಳು ಪೋಲಿಯೋ ಹನಿ ಹಾಕಿಸಿಕೊಂಡಿದ್ದರು.
ಪಾಲಿಕೆ ಆಯುಕ್ತ ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ. ಮಾಲೇಗೌಡ, ನೋಡಲ್ ಅಧಿಕಾರಿ ಡಾ. ಲತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎನ್.ಆರ್. ವಿಜಯ್, ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್. ಪ್ರಕಾಶ್ ಇದ್ದರು.