ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬೇಸಿಗೆಯಲ್ಲಿ ಹೊಟ್ಟೆ ತಣ್ಣಗಾಗಿಸುವ ಹಣ್ಣಿಗೆ ಬಲು ಬೇಡಿಕೆ

Parashurama
Updated On : 24 Feb 2013, 10:04 am

ಭಾರತೀನಗರ: ಬಿಸಿಲಿನ ದಾಹ ತಣಿಸಲು ಮಾರುಕಟ್ಟೆಗೆ ಲಗ್ಗೆ ಹಾಕಿರುವ ಬೇಸಿಗೆ ಮಿತ್ರ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಕಂಡುಬರುತ್ತಿದೆ.
ಜಿಲ್ಲೆಯ ಪ್ರಮುಖ ಪಟ್ಟಣಗಳ ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣುಗಳ ಭರ್ಜರಿ ವ್ಯಾಪಾರ ಕಂಡುಬರುತ್ತಿದ್ದು, ಹಣ್ಣುಗಳನ್ನು ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ನಿರೀಕ್ಷೆಗಿಂತಲೂ ಹೆಚ್ಚು ಬಂದಿದ್ದು, ಸಾರ್ವಜನಿಕರು ಕಲ್ಲಂಗಡಿ ಹಣ್ಣು ಖರೀದಿಸಲು ಮುಗಿಬೀಳುತ್ತಿದ್ದಾರೆ.
ನಾಮ್ದಾರ್ ಮತ್ತು ಕಿರಣ್ ಎಂಬ 2 ತಳಿಯ ಕಲ್ಲಂಗಡಿಯನ್ನು ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದ ಶಿಂಷಾ ಹಾಗೂ ಕಾವೇರಿ ನದಿಯ ಅಕ್ಕಪಕ್ಕದ ರೈತರು ಯಥೇಚ್ಛವಾಗಿ ಬೆಳೆಯುತ್ತಾರೆ.
ಭರ್ಜರಿ ಫಸಲು: ಮಳೆ ಬಂದು ಆಣೆಕಲ್ಲು ಬಿದ್ದಿದ್ದರೆ ಬೆಳೆ ನಷ್ಟವಾಗುತ್ತಿತ್ತು. ಆದರೆ, ಮಳೆ ಕಡಿಮೆಯಾಗಿದ್ದರಿಂದ ಕಲ್ಲಂಗಡಿ ಬೆಳೆ ಭರ್ಜರಿಯಾಗಿ ಬಂದಿದೆ.
ಹಣ್ಣು ಲೇಸು: ಚಳಿಗಾಲದಲ್ಲಿ ಟೀ ಅಂಗಡಿಗಳಿಗೆ ಇನ್ನಿಲ್ಲದ ವ್ಯಾಪಾರ ಬೆಳಗ್ಗೆಯಿಂದ ರಾತ್ರಿಯವರೆಗೂ ನಡೆಯುತ್ತಿತ್ತು. ಆದರೆ, ಬೇಸಿಗೆ ಕಾಲ ಬಂದಿದ್ದರಿಂದ ಹೆಚ್ಚಿನ ಜನರು ಟೀ- ಅಂಗಡಿಗಳಿಂದ ದೂರ ಸರಿದು ಕಲ್ಲಂಗಡಿ ಮಾರುಕಟ್ಟೆಗೆ ಜಮಾಯಿಸಿದ್ದರಿಂದ ಟೀ-ಕಾಫಿ ವ್ಯಾಪಾರ ಕಡಿಮೆಯಾಗಿದೆ.
ಭರ್ಜರಿ ವ್ಯಾಪಾರ: ರಸ್ತೆ ಬದಿಗಳಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ತಲೆಎತ್ತಿದ್ದು, ಬೆಲೆಯೂ ಜನಸಾಮಾನ್ಯರ ಕೈಗೆಟುಕುವಂತಿದೆ. ಇದು ಸಹಜವಾಗಿಯೇ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಿದೆ. ಉರಿ ಬಿಸಿಲಿನಲ್ಲಿ ಕಲ್ಲಂಗಡಿ ಹಣ್ಣಿನ ರುಚಿ ಸವಿಯುವ ಮಜವೇ ಬೇರೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಾರುಕಟ್ಟೆಗೆ ಬಂದಿರುವ ಹೈಬ್ರಿಡ್ ತಳಿಯ ಕಲ್ಲಂಗಡಿ ಕೆಜಿಗೆ 12 ರಿಂದ 15ವರೆಗೆ ಮಾರಾಟವಾಗುತ್ತಿದೆ. ಆದರೆ, ರೈತರಿಗೆ ಲಾಭ ಸಿಗುವುದು ಮಾತ್ರ ಕೆಜಿಗೆ 2 ರಿಂದ 3 ಮಾತ್ರ. ಹೊರ ರಾಜ್ಯದ ಹಣ್ಣುಗಳು ಮಾರುಕಟ್ಟೆಗೆ ಬಂದರಂತೂ ರೈತರೂ ನಷ್ಟ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗುವುದರಿಂದ ಸರ್ಕಾರ ಇತ್ತ ಕಡೆ ಗಮನ ಹರಿಸಬೇಕಾಗಿದೆ.
ರಾಮಬಾಣ: ಕಲ್ಲಂಗಡಿ ಹಣ್ಣಿನ ರಸ ಸೇವನೆ ಮಾಡುವುದರಿಂದ ದೇಹಕ್ಕೆ ನವೋಲ್ಲಾಸ ನೀಡುವುದರ ಜೊತೆಗ ದಾಹ ತೊಲಗಿಸುತ್ತದೆ. ಕಾಮಾಲೆ ಉಪಶಮನಕ್ಕೆ ಪರಿಣಾಮಕಾರಿ ಔಷಧಿಯಾಗಿದೆ. ಜನರನ್ನು ಹೆಚ್ಚಾಗಿ ಬಾಧಿಸುವ ಕಣ್ಣುಉರಿ, ಅಲರ್ಜಿ, ತುರಿಕೆ ಹೋಗಲಾಡಿಸಲು ಬಳಸಬಹುದಾಗಿದೆ. ಕಲ್ಲಂಗಡಿ ಸಿಪ್ಪೆಯಿಂದ ಮಾಡಿದ ಕಷಾಯ ಕುಡಿದರೆ ಮಲಬದ್ಧತೆಯ ನಿವಾರಣೆಗೆ ರಾಮಬಾಣವಾಗಿದೆ. ಕಲ್ಲಂಗಡಿ ಹಣ್ಣಿನ ಗಿಡದ ಎಲೆಗಳು ಬುಡದಲ್ಲಿ ಕಹಿಯಾದರೂ ಮಾನವನ ದೇಹದ ರಕ್ತ ವೃದ್ಧಿಯಾಗುವಲ್ಲಿ ತುಂಬಾ ಸಹಾಯಕ.
- ಅಣ್ಣೂರು ಸತೀಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement