ಮರಳು ಅಡ್ಡೆ ಮೇಲೆ ದಾಳಿ: ಪರಿಕರ ವಶ
ಯಳಂದೂರು: ಅಕ್ರಮ ಮರಳು ತೆಗೆಯುತ್ತಿದ ಅಡ್ಡೆ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮರಳು ತಗೆಯಲು ಬಳಸುತ್ತಿದ್ದ ಮಾವಟಿ, ಹಾರೆ ಮತ್ತು ಮಂಕರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಯಳಂದೂರಿನ ಸುನೀಲ್ ಎಂಬುವರು ಸುವರ್ಣಾವತಿ ನದಿ ಹಂಚಿನಲ್ಲಿರುವ ಜಮೀನಿನಲ್ಲಿ ಪ್ರತಿದಿನ ರಾತ್ರಿ ವೇಳೆ ಕದ್ದು ಅಕ್ರಮ ಮರಳು ದಂಧೆ ನಿರಂತರವಾಗಿ ಮಾಡುತ್ತಿದರು ಎನ್ನಲಾಗಿದೆ. ಈ ಸಂಬಂಧ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಹತ್ತಾರು ಟ್ರಾಕ್ಟರ್ಗಳು ಮರಳು ಸಾಗಣೆ ಮಾಡುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಸಾವಿತ್ರಮ್ಮ ಅವರಿಗೆ ತಾಲೂಕು ಕಚೇರಿಯಲ್ಲಿ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲೂಕು ದಂಡಾಧಿಕಾರಿ ಶಿವನಾಗಯ್ಯ ಅವರು ಅಧಿಕಾರಿಗಳೊಂದಿಗೆ ದಿಡೀರ್ ಭೇಟಿ ನೀಡಿದಾಗ ತೆಗೆದು ಸಂಗ್ರಹಿಸಿದ್ದ ಮರಳನ್ನು ಮತ್ತೆ ಗುಂಡಿಯೊಳಗೆ ತಳ್ಳಿ ಮುಚ್ಚಿದ್ದರು. ಆ ಸಂದರ್ಭದಲ್ಲಿ ಮರಳು ತೆಗೆಯಲು ಬಳಸುತಿದ್ದ ಪರಿಕರಗಳನ್ನು ವಶಪಡಿಸಿಕೊಂಡರು. ನಂತರ ಅವರು ಮಾತನಾಡಿ, ಅಕ್ರಮ ಮರಳು ದಂಧೆ ತಡೆಯಲು ಈಗಾಗಲೇ ನಾಲ್ಕು ತಂಡ ರಚನೆ ಮಾಡಲಾಗಿದೆ ಎಂದರು.