ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾನವನ ಮನಸ್ಸು ಅದ್ಭುತ ಶಕ್ತಿ: ಬಸವರಾಜಪ್ಪ ಅಭಿಮತ

Parashurama
Updated On : 24 Feb 2013, 11:16 am

ಮೈಸೂರು: ಮಾನವನ ಮನಸ್ಸಿಗೆ ಅದ್ಭುತ ಶಕ್ತಿಯಿದೆ ಎಂದು ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿ ವಿ. ಬಸವರಾಜಪ್ಪ ಹೇಳಿದರು.
ಮೈಸೂರು ವಿವಿಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯು ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ಯಶವಂತ ಚಿತ್ತಾಲರ ಪ್ರಾತಿನಿಧಿಕ ಕಥೆಗಳಲ್ಲಿ ಮನೋವೈಜ್ಞಾನಿಕ ವಿಶ್ಲೇಷಣೆ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಮನುಷ್ಯನ ಆಲೋಚನೆ, ಭಾವನೆ ಹಾಗೂ ಬುದ್ಧಿ, ಪರಿಸರ ಜ್ಞಾನ ವಿಜ್ಞಾನಕ್ಕೆ ಪ್ರಮುಖವಾದುದು ಮನಸ್ಸು. ಸುಖ ದುಃಖದ ಸ್ಪಂದನೆಗೂ ಮನಸ್ಸೆ ಕಾರಣ. ಮನಸ್ಸಿಲ್ಲದಿದ್ದರೆ ಮಾನವನ ಯಾವ ಕಾರ್ಯ ನಡೆಯುತ್ತಿರಲಿಲ್ಲ. ಕಣ್ಣಿಗೆ ಕಾಣಿಸದ ಕೈಗೆ ಸಿಗದ ಮನಸ್ಸು ಒಂದು ಅದ್ಭುತ ಶಕ್ತಿ ಎಂದರು.
ನಾಡಿನ ಹೆಸರಾಂತ ಸಾಹಿತಿಗಳಾದ ಕಾರಂತ, ಕುವೆಂಪು, ಅನಂತಮೂರ್ತಿ, ಅಡಿಗ, ದೇವನೂರ, ತೇಜಸ್ವಿ ಮುಂತಾದವರು ತಮ್ಮ ಪ್ರತಿಭೆಯ ಮೂಲಕ ಸಾರಸ್ವತ ಲೋಕದಲ್ಲಿ ವಿಶಿಷ್ಟ ಸಾಧನೆ ಮಾಡಿದವರು. ಕುವೆಂಪು ಹಾಗೂ ಕಾರಂತರಂತೆ ಚಿತ್ತಾಲರು ಸೃಜನಶೀಲ ಬರಹಗಾರರು ಎಂದು ತಿಳಿಸಿದರು.
ಅರವತ್ತಾರು ಕೃತಿಗಳನ್ನು ರಚಿಸಿರುವ ಚಿತ್ತಾಲರು ನಗರ ಹಾಗೂ ಗ್ರಾಮೀಣ ಜೀವನ ಕುರಿತು ಬರೆದಿದ್ದು, ಹೆಚ್ಚಾಗಿ ಗ್ರಾಮೀಣ ವಸ್ತುಗಳಲ್ಲಿ ಕಾಳಜಿ ಮೆರೆದವರು. ಅವರ ಕೃತಿಗಳಲ್ಲಿ ಹಾಸ್ಯ ಹಾಗೂ ಕಾಮ ಕುರಿತ ಪ್ರಸ್ತಾಪಗಳಿವೆ. ವಿಶೇಷವಾಗಿ ಅವರ ಎಲ್ಲಾ ಸಾಹಿತ್ಯಗಳಲ್ಲಿ  ಮನೋವೈಜ್ಞಾನಿಕತೆ ಹಾಗೂ ಮಹತ್ವ ನೀಡಿರುವುದನ್ನು ಕಾಣಬಹುದು ಎಂದು ವಿವರಿಸಿದರು. ಡಾ.ಬೆಸಗರಹಳ್ಳಿ ರಾಮಣ್ಣನವರ ಕಥೆಗಳಲ್ಲಿ ಸ್ತ್ರೀ ಸಂವೇದನೆ ಎಂಬ ವಿಷಯ ಕುರಿತು ವಿದ್ಯಾರ್ಥಿನಿ ಎಸ್.ಕೆ. ಬಿಂದುರಾಣಿ ಮಾತನಾಡಿದರು. ಕರ್ನಾಟಕ ರಾಜ್ಯ ಮುಕ್ತ ವಿವಿಯ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಕವಿತಾ ರೈ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಇದ್ದರು. ಎನ್.ಎಸ್. ಅನ್ನಪೂರ್ಣ ಆಶಯಗೀತೆ ಹಾಡಿದರು. ಆರ್.ಸಿ. ದೇವರಾಜು ಸ್ವಾಗತಿಸಿದರು. ಎಸ್. ಶಿಲ್ಪ ನಿರೂಪಿಸಿದರು. ಎಂ. ಸವಿತ ಗೋಷ್ಠಿ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement