ಸಹೋದ್ಯೋಗಿಗಳ ಕಿರುಕುಳ: ಮನನೊಂದ ಶಿಕ್ಷಕಿ ಆತ್ಮಹತ್ಯೆ
ಮೈಸೂರು: ಸಹ ಶಿಕ್ಷಕರ ಕಿರುಕುಳದಿಂದ ಶಿಕ್ಷಕಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲೂಕಿನ ಅರಸನಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ.
ಮೈಸೂರಿನ ಬಿಎಂಶ್ರೀನಗರ ನಿವಾಸಿ ಲೇ. ಯೋಗೇಶ್ ಎಂಬವರ ಪತ್ನಿ ಹಾಗೂ ಶಿಕ್ಷಕಿ ಸಂಧ್ಯಾರಾಣಿ (30) ಆತ್ಮಹತ್ಯೆ ಮಾಡಿಕೊಂಡವರು. ಇವರು ಕಳೆದ 3 ವರ್ಷಗಳಿಂದ ಅರಸನಕೆರೆ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಪತಿ ಇಲ್ಲದ ಹಿನ್ನೆಲೆಯಲ್ಲಿ ಸಹ ಶಿಕ್ಷಕರು ಹಾಗೂ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು. ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಸಂಧ್ಯಾರಾಣಿ ಶನಿವಾರ ತರಗತಿಯಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಂಧ್ಯಾರಾಣಿ ತಾಯಿ ಸುಶೀಲಮ್ಮ ಅವರು ನೀಡಿರುವ ದೂರಿನನ್ವಯ ಜಯಪುರ ಠಾಣೆ ಪೊಲೀಸರು ಮುಖ್ಯ ಶಿಕ್ಷಕ ಶಂಭುಲಿಂಗು, ಸಹ ಶಿಕ್ಷಕರಾದ ಅಶೋಕ, ನಳಿನಿ ನೀಲಾವತಿ, ಭವಾನಿ, ನಾಜೀಮಾ, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೈಕ್ ಸವಾರ ಸಾವು
ಮೈಸೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸಿದ್ಧಾರ್ಥ ಬಡಾವಣೆಯಲ್ಲಿರುವ ಮೈಮುಲ್ ಬಳಿಯ ಡಿಎಫ್ಆರ್ಎಲ್ ಗೇಟ್ ಎದುರು ಶನಿವಾರ ಮಧ್ಯರಾತ್ರಿ ನಡೆದಿದೆ. ಮೈಸೂರು ಹೊರವಲಯದಲ್ಲಿರುವ ಸರ್ದಾರ್ ವಲ್ಲಬಾಯಿಪಟೇಲ್ ನಗರ ನಿವಾಸಿ ಹಾಗೂ ಎನ್.ಆರ್. ಸಂಚಾರ ಠಾಣೆಯ ಮುಖ್ಯಪೇದೆ ಜಿ.ಎಚ್. ಮಲ್ಲು ಎಂಬವರ ಪುತ್ರ ಭರತ್ಕುಮಾರ್ (23) ಮೃತಪಟ್ಟವರು. ಇವರು ಎಂಜಿನಿಯರಿಂಗ್ ಓದಿದ್ದು, ಸರಸ್ವತಿಪುರಂನಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಹೋಗುತ್ತಿದ್ದರು. ಮೈಮುಲ್ ಡೈರಿ ಪಕ್ಕದ ಡಿಎಫ್ಆರ್ಎಲ್ ಗೇಟ್ ಬಳಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈ ಸಂಬಂಧ ಲಷ್ಕರ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.
ಜೈಲಿನಿಂದ ಬಂದ, ಪ್ರೀತಿಸಿದವಳ ಕೈ ಹಿಡಿದ..
ಮೈಸೂರು: ಪ್ರೀತಿಸಿದ ಯುವತಿಯಿಂದಲೇ ಅತ್ಯಾಚಾರ ಆರೋಪ ಹೊತ್ತು ಜೈಲು ಸೇರಿದ ಯುವಕ, ಜೈಲಿನಿಂದ ಹೊರಬಂದ ನಂತರ ಅದೇ ಯುವತಿಯನ್ನು ಮದುವೆಯಾದ ಘಟನೆ ಭಾನುವಾರ ನಡೆಯಿತು. ಮೈಸೂರು - ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರ ನಿವಾಸಿಗಳಾದ ಹರೀಶ್ ಮತ್ತು ಮಧುಶ್ರೀ ಮದುವೆಯಾದವರು. ಬೇರೆ ಬೇರೆ ಜಾತಿಯಾದವರಾದ ಈ ಜೋಡಿ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಗೊತ್ತಾಗಿ ಹರೀಶ್ ಪೋಷಕರು ಬೇರೆ ಹುಡುಗಿ ನೋಡುತ್ತಿದ್ದರು. ಈ ವಿಷಯ ತಿಳಿದು ಮಧುಶ್ರೀ ತನ್ನ ಹಾಗೂ ಹರೀಶ ನಡುವೆ ಇರುವ ಸಂಬಂಧವನ್ನು ಊರ ಪಂಚಾಯ್ತಿಯಲ್ಲಿ ತಂದಿದ್ದರು. ಆರಂಭದಲ್ಲಿ ಮಧುಶ್ರೀಯನ್ನು ತನ್ನ ಮನೆಯ ಸೊಸೆ ಮಾಡಿಕೊಳ್ಳುವುದಾಗಿ ಹರೀಶ್ ತಂದೆ ಒಪ್ಪಿಕೊಂಡಿದ್ದರು. ಆದರೆ, ಕೆಲವು ದಿನಗಳಲ್ಲಿ ಅವರ ನಿರ್ಧಾರ ಬದಲಾಗಿತ್ತು.
ಇಂತಹ ಪರಿಸ್ಥಿತಿಯಲ್ಲಿ ಮಧುಶ್ರೀ ಅನಿವಾರ್ಯವಾಗಿ ಹರೀಶ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಮೇಟಗಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹರೀಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮೂಲಕ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಹರೀಶ್ ಮನಪರಿವರ್ತನೆಯಾಗಿ ಮಧುಶ್ರೀಯನ್ನು ಮದುವೆಯಾಗುವುದಾಗಿ ಸ್ಪಷ್ಟಪಡಿಸಿದರು. ಇದರಿಂದ ಕೆಲವು ದಿನಗಳ ಹಿಂದಯಷ್ಟೇ ಹರೀಶ್ಗೆ ನ್ಯಾಯಾಲಯವು ಜಾಮೀನು ನೀಡಿದೆ. ಎರಡೂ ಕುಟುಂಬದವರು ಭಾನುವಾರ ಲಿಂಗಾಬುದಿಪಾಳ್ಯದಲ್ಲಿರುವ ಶ್ರೀರಾಮಮಂದಿರಲ್ಲಿ ಹರೀಶ್ ಮತ್ತು ಮಧುಶ್ರೀ ಮದುವೆ ನೆರವೇರಿಸಿದರು.
ಲಾರಿ ಜೀಪ್ ಡಿಕ್ಕಿ: ಇಬ್ಬರ ಸಾವು
ಭೇರ್ಯ: ಇಲ್ಲಿನ ಮೈಸೂರು- ಹಾಸನ ರಾಜ್ಯ ಹೆದ್ದಾರಿಯಲ್ಲಿ ಲಾರಿ ಮತ್ತು ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಗೇರುದಡ ಗೇಟ್ ಬಳಿ ಭಾನುವಾರ ಜರುಗಿದೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಶಿಂಡೇನಹಳ್ಳಿ ಗ್ರಾಮದ ಕೆಂಚಯ್ಯ ಎಂಬವರ ಪುತ್ರ ಲೋಕೇಶ್ (35) ಹಾಗೂ ಮೈಲಾರಯ್ಯ ಅವರ ಪುತ್ರ ಮಲ್ಲೇಶ್ (34) ಮೃತಪಟ್ಟವರು. ಗಾಯಗೊಂಡ ಭರತ್ (40), ಶೆಟ್ಟಿಯಪ್ಪ (45) ಹಾಗೂ ಮೈಲಾರಯ್ಯ (57) ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆ ದಾಖಲು ಮಾಡಲಾಗಿದೆ. ಇವರು ಭೇರ್ಯ ಸಮೀಪವಿರುವ ಗೇರುದಡ ಗ್ರಾಮಕ್ಕೆ ವರಾನ್ವೇಷಣೆಗಾಗಿ ಬಂದು, ತಮ್ಮ ಊರಿಗೆ ಜೀಪಿನಲ್ಲಿ ವಾಪಸ್ ತೆರಳುವಾಗ ಗೇರುದಡ ಗೇಟ್ ಬಳಿ ಹಾಸನದಿಂದ ಮೈಸೂರಿಗೆ ಬರುತ್ತಿದ್ದ ಲಾರಿಯು ಜೀಪ್ಗೆ ಡಿಕ್ಕಿ ಹೊಡೆಯಿತು. ಈ ಸಂಬಂಧ ಸಾಲಿಗ್ರಾಮ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.