ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿ
ಟಿ. ನರಸೀಪುರ: ರೈತರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು, ಕಡಿಮೆ ಪ್ರಮಾಣದ ನೀರಿನಲ್ಲಿ ಅಧಿಕ ಇಳುವರಿ ಪಡೆಯುವ ಬಿತ್ತನೆ ಬೀಜಗಳನ್ನು ಉಪಯೋಗಿಸಿಕೊಂಡು ಉತ್ತಮ ಬೆಳೆ ಬೆಳೆಯಬೇಕು ಎಂದು ಶಾಸಕ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಕೃಷಿ ಮಾಹಿತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನ ಸಂಖ್ಯೆಯ ಹೆಚ್ಚಳದಿಂದಾಗಿ ಅರಣ್ಯ ಪ್ರದೇಶ ಕ್ರಮೇಣವಾಗಿ ಕಡಿಮೆಯಾಗುತ್ತಿದ್ದರೆ, ಬೆಳೆ ಬೆಳೆಯುವ ಭೂ ಪ್ರದೇಶದ ವಿಸ್ತಾರವು ಕ್ಷೀಣಿಸುತ್ತಾ ಅಂತರ್ಜಲ ತಳ ಸೇರುತ್ತಿರುವುದರಿಂದ ಕೃಷಿಯಲ್ಲಿ ವೈಜ್ಞಾನಿಕತೆಯನ್ನು ರೈತರು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು.
ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ.ಶಿವಶಂಕರ್, ಗುರುಸ್ವಾಮಿ, ಹೊಂಬಯ್ಯ ಮಾತನಾಡಿ, ರೈತರು ಸಮಗ್ರ ಕೃಷಿಗೆ ಚಿಂತನೆ ನಡೆಸಬೇಕು. ಮಣ್ಣಿನ ಫಲವತ್ತತೆಯನ್ನು ಪರೀಕ್ಷೆಗೊಳಪಡಿಸಬೇಕು. ದೇಶಿಯ ತಳಿಗಳನ್ನು ಅಭಿವೃದ್ಧಿಪಡಿಸಿಕೊಂಡು ಮಾರಕ ರಸಗೊಬ್ಬರ ಬಳಕೆಯನ್ನು ಕೈ ಬಿಡಬೇಕು ಎಂದು ಮಾಹಿತಿ ನೀಡುವ ಮೂಲಕ ವೈಜ್ಞಾನಿಕ ಕೃಷಿ ಪದ್ಧತಿಯ ಬಗ್ಗೆ ತಿಳಿಸಿಕೊಟ್ಟರು.
ವಸ್ತುಪ್ರದರ್ಶನ: ಉತ್ತಮ ಬೆಳೆ ಬೆಳೆದ ರೈತರನ್ನು ಸನ್ಮಾನಿಸಿತು. ವೈಜ್ಞಾನಿಕ ಕೃಷಿ ಪದ್ಧತಿಗೆ ಅಗತ್ಯವಿರುವ ಕೃಷಿ ಸಲಕರಣೆಗಳು, ವಿವಿಧ ತಳಿಯ ಬೆಳೆಗಳ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ತಾಪಂ ಅಧ್ಯಕ್ಷ ತುಂಬಲ ಅಂದಾನಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್. ಸಿದ್ಧಾರ್ಥ, ಎಪಿಎಂಸಿ ಅಧ್ಯಕ್ಷ ಎಂ. ರಾಜು, ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನಸ್ವಾಮಿ, ಭೈರಾಪುರ ಗ್ರಾಪಂ ಅಧ್ಯಕ್ಷೆ ಪದ್ಮಾವೆಂಕಟೇಶ್, ಜಿಪಂ ಸದಸ್ಯೆ ರೇಣುಕಾ ರಾಮು, ತಾಪಂ ಸದಸ್ಯರಾದ ಶಿವಮ್ಮ ಮಹದೇವ, ನಟರಾಜು, ಬಸವರಾಜು, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಪಿಎಲ್ಡಿ ಬ್ಯಾಂಕ್ ನಿರ್ದೇಶಕಿ ಸುಮಿತ್ರಾ ಅಂಕಪ್ಪ, ಸಹಾಯಕ ಕೃಷಿ ನಿರ್ದೇಶಕ ಕೃಷ್ಣಮೂರ್ತಿ ಇದ್ದರು.