ಜೆಡಿಎಸ್ನಿಂದ ಅಯೂಬ್ ಬಂಡಾಯ ಸ್ಪರ್ಧೆ
ಮೈಸೂರು: ಜೆಡಿಎಸ್ ಪಕ್ಷದಿಂದ ತಮಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವುದಾಗಿ ನಗರ ಜೆಡಿಎಸ್ ವಕ್ತಾರ ಅಯೂಬ್ಖಾನ್ ಹೇಳಿದರು.
ರಾತ್ರೋರಾತ್ರಿ ಕಾಂಗ್ರೆಸ್ನಿಂದ ಜೆಡಿಎಸ್ಗೆ ಸೇರ್ಪಡೆಗೊಂಡವರಿಗೆ ವಾರ್ಡ್ ನಂ.58 ಮತ್ತು 59ರಲ್ಲಿ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ನಿಂದ ವಲಸೆ ಬಂದ ಮಂಜು ಮತ್ತು ಫರ್ವೀನ್ ತಾಜ್ ಎಂಬುವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ನನಗೆ ಪಕ್ಷದಲ್ಲಿನ ಕೆಲವು ಉದ್ಯಮಿಗಳು ಅನ್ಯಾಯ ಮಾಡಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಜೆಡಿಎಸ್ನ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ನನಗೆ ಬೇಸರ ಆಗುತ್ತಿರಲಿಲ್ಲ. ಆದರೆ ವಲಸೆ ಬಂದವರಿಗೆ ಟಿಕೆಟ್ ನೀಡಿರುವುದು ಬೇಸರಕ್ಕೆ ಕಾರಣವಾಗಿದೆ. ಜೆಡಿಎಸ್ನಲ್ಲಿ ಶಿಸ್ತು ಮತ್ತು ಸಿದ್ಧಾಂತ ರಾತ್ರೋರಾತ್ರಿ ಮಾಯವಾಗಿದೆ. ಆದರೂ ಪಕ್ಷದಲ್ಲಿನ ನನ್ನ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ಬದಲಿಗೆ ಪಕ್ಷದಲ್ಲಿ ಇದ್ದುಕೊಂಡೆ ಬಂಡಾಯವಾಗಿ ವಾರ್ಡ್ ನಂ.58 ರಿಂದ ಸ್ಪರ್ಧಿಸುತ್ತಿದ್ದೇನೆ. 59ನೇ ವಾರ್ಡ್ಗೆ ನನ್ನ ತಾಯಿ ರಜಿಯಾ ಬೇಗಂ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸುತ್ತಿದ್ದೇನೆ. ಜನತೆ ನನಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ನನಗೆ ಟಿಕೆಟ್ ಕೈತಪ್ಪಿರುವ ಸಂಬಂಧ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ವೈ.ಎಸ್.ವಿ. ದತ್ತ, ಮಧು ಬಂಗಾರಪ್ಪ ಅವರ ಬಳಿ ಮಾತನಾಡಿದ್ದೇನೆ. ಅವರು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವುದಾಗ ಭರವಸೆ ನೀಡಿದರು. ಆದರೆ ನನಗೆ ಭರವಸೆ ಬೇಡ ಎಂದು ತಿಳಿಸಿರುವುದಾಗಿ ಹೇಳಿದರು.