ಮಾ.2 ರಿಂದ ರಂಗ ತರಬೇತಿ ಶಿಬಿರ
ಮೈಸೂರು: ಅಭಿಯಂತರರ ರಂಗ ತಂಡವು ತನ್ನ 20ನೇ ವಾರ್ಷಿಕೋತ್ಸವ ಅಂಗವಾಗಿ ರಂಗಭೂಮಿಯತ್ತ ಹೆಸರಿನ ರಂಗ ತರಬೇತಿ ಶಿಬಿರವನ್ನು ಮಾ.2 ರಿಂದ ಏರ್ಪಡಿಸಿದೆ.
ಎಂಜಿನಿಯರ್ಗಳೇ ಕಟ್ಟಿರುವ ಈ ರಂಗ ತಂಡದ ಶಿಬಿರದಲ್ಲಿ ಎಂಜಿನಿಯರ್ಗಳು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುತ್ತಿದ್ದಾರೆ. ಕಲಾಮಂದಿರದ ಮನೆಯಂಗಳದಲ್ಲಿ ಮಾ.2ರ ಸಂಜೆ 5ಕ್ಕೆ ಈ ಶಿಬಿರವನ್ನು ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಚಿತ್ರ ನಟ ಮಂಡ್ಯ ರಮೇಶ್, ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆ ಅಧ್ಯಕ್ಷ ಎಚ್.ಎಸ್. ಸುರೇಶ್ ಬಾಬು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಿಬಿರದಲ್ಲಿ ರಂಗಗೀತೆ, ಕಂಸಾಳೆ, ಕೋಲಾಟ, ನಟನೆ, ನಿರ್ದೇಶನ, ಪ್ರಸಾದನ, ಚಿತ್ರಕಲೆ, ಮೂಕಾಭಿನಯ ಹಾಗೂ ಪ್ರಾಣಾಯಾಮದ ಬಗ್ಗೆ ತರಬೇತಿ ನೀಡಲಾಗುತ್ತದೆ. ನಗರದ ಇನ್ಫೋಸಿಸ್, ಬಿಇಎಂಎಲ್, ಮೈಸೂರು ವಿವಿ, ನೀರಾವರಿ ನಿಗಮ, ಎಸ್ಜೆಸಿಇ,ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸುಮಾರು 57 ಮಂದಿ ಭಾಗವಹಿಸುವರು ಎಂದು ಹೇಳಿದರು.
ಈ ಪೈಕಿ 20 ಮಂದಿ ಯುವತಿಯರು ಮತ್ತು ನಿವೃತ್ತ ಎಂಜಿನಿಯರ್ಗಳು ಇದ್ದಾರೆ. 1 ತಿಂಗಳ ಈ ಶಿಬಿರದಲ್ಲಿ 1 ವಿಚಾರ ಸಂಕಿರಣ, 1 ಕನ್ನಡ ಮತ್ತು 1 ಇಂಗ್ಲಿಷ್ ನಾಟಕ ಅಭಿನಯಿಸಲಾಗುವುದು. ನೀನಾಸಂ ಪದವೀಧರ ಮಂಜುನಾಥ್ ಬಡಿಗಾರ್ ಶಿಬಿರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಕಲಾಮಂದಿರದ ಆವರಣದಲ್ಲಿ ಈ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಶಿಬಿರಾರ್ಥಿಗಳಿಂದ ತಲಾ 300 ಪ್ರವೇಶ ಶುಲ್ಕ ಪಡೆಯಲಾಗುತ್ತಿದೆ ಎಂದು ಹೇಳಿದರು.