ವಿದ್ಯಾರ್ಥಿ ಕ್ಷೇಮಪಾಲಕರ ದುರಾಡಳಿತ ಖಂಡಿಸಿ ಪ್ರತಿಭಟನೆ
ಮೈಸೂರು: ವಿದ್ಯಾರ್ಥಿ ಕ್ಷೇಮಪಾಲಕರ ದುರಾಡಳಿತ ಮತ್ತು ಸರ್ವಾಧಿಕಾರಿ ನೀತಿ ಖಂಡಿಸಿ ದಲಿತ ವಿದ್ಯಾರ್ಥಿ ಒಕ್ಕೂಟದವರು ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿರುವ ಇಎಂಎಂಆರ್‌ಸಿ ಎದುರು ಬುಧವಾರ ಪ್ರತಿಭಟಿಸಿದರು.
ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಲಯಗಳ ಈಗಿನ ವಿದ್ಯಾರ್ಥಿ ಕ್ಷೇಮಪಾಲಕರು ವಿದ್ಯಾರ್ಥಿಗಳ ನಡುವೆ ಗುಂಪುಗಾರಿಕೆ ಮತ್ತು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ದುಡಿಯಬೇಕಾದ ಕ್ಷೇಮಪಾಲಕರು, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪುರುಷರ ಬ್ಲಾಕ್- 1 ವಿದ್ಯಾರ್ಥಿನಿಲಯದಲ್ಲಿ ಕೆಟ್ಟಿರುವ 2 ಅಕ್ವಾಗಾರ್ಡ್‌ಗಳನ್ನು ರಿಪೇರಿ ಮಾಡಿಸಿ, ಶುದ್ಧ ಕುಡಿಯುವ ನೀರು ಒದಗಿಸಬೇಕು. ಸ್ನಾತಕೋತ್ತರ ವಿದ್ಯಾರ್ಥಿನಿಲಯಗಳ ಊಟದ ಹಾಲ್‌ನಲ್ಲಿ ಅಳವಡಿಸಲಾಗಿರುವ ಜನರೇಟರ್ ಬಳಕೆ ಆಗಬೇಕು. ನಿರ್ಮಲ್ ರಾಜ್ ಅವರು ಡೀನ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ಸಮಸ್ಯೆ ಕೇಳಿಲ್ಲ ಎಂದು ದೂರಿದರು.
ಪೀಠೋಪಕರಣ ಅಳವಡಿಸಿ: ಮಹಾರಾಜ ಕಾಲೇಜು ವಿದ್ಯಾರ್ಥಿನಿಲಯಗಳ ಕೊಠಡಿಗಳಿಗೆ ಪೀಠೋಪಕರಣ ಅಳವಡಿಸಬೇಕು. ಸ್ವಚ್ಛತೆ ಕಾಪಾಡಬೇಕು. ಯಾವುದೇ ಕಾರಣವಿಲ್ಲದೆ ಸ್ನಾತಕೋತ್ತರ ಪುರುಷರ ಹಾಗೂ ಮಹಿಳಾ ವಿದ್ಯಾರ್ಥಿನಿಲಯದ ನಿಲಯಪಾಲಕರನ್ನು ಬದಲಾವಣೆ ಮಾಡಲಾಗಿದೆ. ಗಣಕ ಕೇಂದ್ರ ಕಟ್ಟಡಕ್ಕೆ ನಗರಪಾಲಿಕೆಯು 1 ಕೋಟಿ ನೀಡಿದೆ. ಆದರೆ, ಈವರೆಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಸಜ್ಜುಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ವಿದ್ಯಾರ್ಥಿ ಕ್ಷೇಮಪಾಲನ ವಿಭಾಗ ಅವರ ಸಂಶೋಧನಾ ವಿದ್ಯಾರ್ಥಿಗಳ ತಂಗುದಾಣ ಹಾಗೂ ಖಾಸಗಿ ಸಂಶೋಧನಾ ಕೊಠಡಿಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರನ್ನು ಕೂಡಲೇ ಬದಲಾವಣೆ ಮಾಡಬೇಕು. ದೂರದೃಷ್ಟಿಯುಳ್ಳ ನಿರ್ದೇಶಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ವಿವಿ ಕುಲಸಚಿವ ಪ್ರೊ.ಪಿ.ಎಸ್. ನಾಯಕ್ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದರು. ಒಕ್ಕೂಟದ ಅಧ್ಯಕ್ಷ ಎಂ.ಜಿ. ಮನೋಜ್‌ಕುಮಾರ್, ಕಾರ್ಯಾಧ್ಯಕ್ಷ ರಾಮ್‌ಶೇಖರ್, ಪ್ರಧಾನ ಕಾರ್ಯದರ್ಶಿ ಬಿ. ರೇವಣ್ಣ, ಸಂಘಟನಾ ಕಾರ್ಯದರ್ಶಿ ರಾಮರಾಜ್ ಮೊದಲಾದವರು ಇದ್ದರು.