'ಆದಿವಾಸಿಗಳಿಗೆ ಉತ್ತಮ ಶಿಕ್ಷಣ ಅಗತ್ಯ'
ಹುಣಸೂರು: ಆದಿವಾಸಿಗಳ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಮಹತ್ತರ ಪಾತ್ರ ವಹಿಸುತ್ತದೆ ಎಂದು ಡೀಡ್ ಸಂಸ್ಥೆಯ ಅಧ್ಯಕ್ಷ ಎಸ್. ಶ್ರೀಕಾಂತ್ ಅಭಿಪ್ರಾಯಪಟ್ಟರು.
ಡೀಡ್ ಸಂಸ್ಥೆ ಏರ್ಪಡಿಸಿದ್ದ ಆದಿವಾಸಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಶಿಕ್ಷಣದಲ್ಲಿ ತೊಡಗಿರುವ ಆದಿವಾಸಿ ವಿದ್ಯಾರ್ಥಿಗಳು ತಮ್ಮ ತಾಯಿ ಭಾಷೆಯನ್ನು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಜತೆಗೆ ಉಳಿಸಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಶಿಕ್ಷಣ ಪಡೆದ ಆದಿವಾಸಿ ವಿದ್ಯಾರ್ಥಿಗಳು ಹಾಡಿಗಳ ಅಭಿವೃದ್ಧಿಗೆ ಜೀವನದ ಅನುಭವ ಬರೆಯಲು, ಹಾಡಿ ಜನ ಜೀವನದೊಂದಿಗೆ ಸದಾ ಬೆರೆಯುತ್ತಿರಬೇಕು ಎಂದು ಹೇಳಿದರು.
ತಾ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾಯಿನಾಥ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಆದಿವಾಸಿಗಳ ತಾಯಿ ಭಾಷೆ ಕುರಿತು ಡೀಡ್ ಸಂಸ್ಥೆ ಹಾಗೂ ಬುಡಕಟ್ಟು ಕೃಷಿಕರ ಸಂಘದ ಸಹಯೋಗದೊಂದಿಗೆ ಹುಣಸೂರಿನ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ಏರ್ಪಡಿಸುವ ಅಭಿಲಾಷೆ ಹೊಂದಿದೆ ಎಂದು ತಿಳಿಸಿದರು.
ಶ್ರೀಕಾಂತ್ ಅವರು ಬರೆದಿರುವ ನೊಂದವರ ಹಂಬಲದ ಹಾಡುಗಳು ಪುಸ್ತಕದ 3ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಬಿ. ಶಿವರಾಜೇಗೌಡ, ಡೀಡ್ ಹಾಗೂ ಟಿಡಿಎಚ್ ಸಂಸ್ಥೆಯ ಪರವಾಗಿ ಶಿಷ್ಯವೇತನ ವಿತರಿಸಿ ಮಾತನಾಡಿದರು.
ನಿಸರ್ಗದ ನಂಜುಂಡಯ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳಿಗೆ ಪರಿಸರದ ಮೇಲಿರುವ ಹಕ್ಕುಗಳ ಬಗ್ಗೆ ಬೆಳಕು ಚೆಲ್ಲಿದರು. ಕರ್ನಾಟಕ ಜೈವಿಕ ಇಂಧನ ಮಂಡಳಿಯು ಹೊರ ತಂದಿರುವ ಜೈವಿಕ ಇಂಧನ ಮರಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಜಿಲ್ಲಾಡಳಿತ, ಜಿಪಂ ಜತೆ ಸೇರಿ ಡೀಡ್ ಸಂಸ್ಥೆಯು ಜಿಲ್ಲೆಯಲ್ಲಿ 2,518 ರೈತ ಕುಟುಂಬ ಗುರುತಿಸಿರುವುದರಿಂದ ಮಂಡಳಿಯು ಮೊದಲ ಕಂತು ಹೊಂಗೆ, ಹಿಪ್ಪೆ, ಬೇವು, ಸೀಮಾರುಬ ಗಿಡ ಬೆಳೆಯಲು ನೇರವಾಗಿ ರೈತ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿದೆ. ರೈತರು ತಲಾ 60 ಗಿಡಗಳನ್ನು ನೆಟ್ಟು 2ನೇ ಕಂತಿಗೆ ಫೋಟೋ ಸಮೇತ ಅರ್ಜಿ ನೀಡಬೇಕೆಂದು ಹೇಳಿದರು.
ಆದಿವಾಸಿ ಹಿರಿಯ ಸಣ್ಣಯ್ಯ ಮಾತನಾಡಿದರು. ಲಲಿತ ಕರುಂಬಯ್ಯ ಮತ್ತು ಪ್ರಕಾಶ ಮಕ್ಕಳಿಗೆ ವಿಶೇಷ ಶಿಷ್ಯವೇತನ ವಿತರಿಸಿದರು.
ಗ್ರಾಪಂ ಉಪಾಧ್ಯಕ್ಷ ರಾಮಕೃಷ್ಣ ಕೊತ್ತೇಗಾಲ ಸ್ವಾಗತಿಸಿದರು. ಚಂದ್ರಮ್ಮ ವಂದಿಸಿದರು. ಪಿ.ಕೆ. ರಾಮು ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.