ಕೆಜೆಪಿ ಬೆಂಬಲ ಇಲ್ಲದೇ ಪಾಲಿಕೆ ಅಧಿಕಾರ ಸಿಗದು
ಮೈಸೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯ 8 ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೆಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದರು.
ಇಲ್ಲಿನ ಸಿದ್ಧಾರ್ಥನಗರದ ಗಣಪತಿ ದೇವಸ್ಥಾನದ ಬಳಿ ಚುನಾವಣಾ ಪ್ರಚಾರಕ್ಕೆ ಗುರುವಾರ ಚಾಲನೆ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಪಕ್ಷಕ್ಕೆ ದೊರೆತ ಮೊದಲ ಗೆಲವು. ಕಳೆದ 3 ತಿಂಗಳ ಹಿಂದೆಯಷ್ಟೇ ಆರಂಭವಾದ ಪಕ್ಷಕ್ಕೆ ಸಂಘಟನೆ ಮಾಡಿಕೊಳ್ಳಲು ಕಾಲಾವಕಾಶ ಕಡಿಮೆ ಇದೆ ಎಂದರು.
ಕೆಜೆಪಿಗೆ ಇದು ಮೊದಲ ಚುನಾವಣೆ. ಆದರೂ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಲಾಗುತ್ತಿದೆ. ತರಾತುರಿಯಲ್ಲಿ ಪಕ್ಷ ಸಂಘಟಿಸಿದ್ದರೂ ಮೈಸೂರು ಪಾಲಿಕೆಯ 52 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಪಾಲಿಕೆಯಲ್ಲಿ ಕೆಜೆಪಿ ಅಧಿಕಾರಕ್ಕೆ ಬರಬೇಕು. ಇಲ್ಲವೆ ನಮ್ಮ ಬೆಂಬಲ ಇಲ್ಲದೆ ಯಾವ ಪಕ್ಷವೂ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತುಮಕೂರಿನಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ನಾನು ಮೈಸೂರಿನಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಅವರು ಮಂಡಿಸಿದ ಬಜೆಟ್ ಮತ್ತು ಗ್ರಾಮೀಣ ಭಾಗದ ರೈತರು, ಮಹಿಳೆಯರು ಮತ್ತು ದಲಿತರಿಗೆ ನೀಡಿದ ಕಾರ್ಯಕ್ರಮಗಳನ್ನೆ ಪ್ರಣಾಳಿಕೆ ಎಂದು ತಿಳಿದು ಪ್ರಚಾರದಲ್ಲಿ ತೊಡಗಬೇಕು. ಈ ಸ್ಥಳೀಯ ಸಂಸ್ಥೆ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ಮೆಟ್ಟಿಲಾಗಲಿದೆ. ಆದ್ದರಿಂದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ತೆರೆದ ವಾಹನದಲ್ಲಿ ಟೆರೇಷಿಯನ್ ಕಾಲೇಜು ರಸ್ತೆ, ಬನ್ನೂರು ರಸ್ತೆ, ಆಲನಹಳ್ಳಿ ಬಡಾವಣೆ, ಲಲಿತಮಹಲ್ ರಸ್ತೆಯಲ್ಲಿ ಪ್ರಚಾರ ನಡೆಸಿದ ಅವರು ಕೆಜೆಪಿ ಅಭ್ಯರ್ಥಿಗಳಾದ ವಿನೋದಾ ದೊರೆಸ್ವಾಮಿ, ಡಿ. ಪ್ರೇಮಾ ಮತ್ತು ಎನ್. ರೇಣುಕಾ ಅವರ ಪರ ಮತಯಾಚಿಸಿದರು.
ಬಳಿಕ ವಿದ್ಯಾರಣ್ಯಪುರಂ ಚಾಮುಂಡಿವನ, ಶಾಂತಿಸಾಗರ್, ವಿವೇಕಾನಂದ ವೃತ್ತ, ಟಿ.ಕೆ. ಬಡಾವಣೆ, ಹೆಬ್ಬಾಳು, ರಾಜೇಂದ್ರನಗರ, ಕೆಸರೆ, ಅಂಬೇಡ್ಕರ್ ನಗರಗಳಲ್ಲಿ ಸಂಚರಿಸಿ ಪಕ್ಷದ ಪರ ಪ್ರಚಾರ ನಡೆಸಿದರು.
ಪಕ್ಷದ ಮುಖಂಡರಾದ ಎಚ್.ವಿ. ರಾಜೀವ್, ಕಾ.ಪು. ಸಿದ್ದಲಿಂಗಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ವಿ. ಫಣೀಶ್, ಜಿಲ್ಲಾಧ್ಯಕ್ಷ ಬಿ.ಎಂ. ರಾಮು, ನಗರ ಅಧ್ಯಕ್ಷ ಯು.ಎಸ್. ಶೇಖರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.