ವಿದ್ವಾಂಸ ವೇಟೂರಿ ವಿಶ್ವ ಕುಟುಂಬಿ ಚಿಂತಕ
ಮೈಸೂರು: ವಿದ್ವಾಂಸ ವೇಟೂರಿ ಪ್ರಭಾಕರ ಶಾಸ್ತ್ರಿ ಅವರು ವಿಶ್ವ ಕುಟುಂಬಿ ಚಿಂತಕ ಎಂದು ಹೈದರಬಾದಿನ ಉಸ್ಮಾನಿಯ ವಿವಿ ನಿವೃತ್ತ ಪ್ರಾಧ್ಯಾಪಕ ವೇಟೂರಿ ಆನಂದಮೂರ್ತಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿವಿಯ ತೆಲುಗು ವಿಭಾಗ ಹಾಗೂ ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನದ ವೇಟೂರಿ ಪ್ರಭಾಕರ ಶಾಸ್ತ್ರಿ ವಾಗ್ಮಯಿ ಪೀಠ ಸಂಯುಕ್ತಾಶ್ರಯದಲ್ಲಿ ಮುಕ್ತ ಗಂಗೋತ್ರಿಯ ತುಂಗಭದ್ರ ಸಭಾಂಗಣದಲ್ಲಿ ವೇಟೂರಿ ಪ್ರಭಾಕರ ಶಾಸ್ತ್ರಿ 125ನೇ ಜಯಂತಿ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಎಲ್ಲರೂ ಸರಿಸಮಾನರಾಗಿ ಬದುಕುಬೇಕು. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ಭಾರತೀಯ ಸಂಸ್ಕೃತಿಯಲ್ಲಿ ಎಲ್ಲರೂ ಒಂದೇ ಕುಟುಂಬದವರು ಎಂದು ಸದಾ ಚಿಂತಿಸುತ್ತಿದ್ದ ಚಿಂತಕ ವೇಟೂರಿ ಪ್ರಭಾಕರ ಶಾಸ್ತ್ರಿ ಅವರು ವಿಶ್ವ ಕುಟುಂಬಿ ಚಿಂತಕರಾಗಿದ್ದರು ಎಂದರು.
ತೆಲುಗು ಭಾಷೆಯ ಲಿಪಿ ಪರಿಷ್ಕರಿಸಿ ಆಧುನಿಕ ಯುವ ಪೀಳಿಗೆಗೆ ಸುಲಭ ಸಾಹಿತ್ಯ ನೀಡಿದ ವೇಟೂರಿಯವರು, ಸಂಗೀತ, ಸಂಸ್ಕೃತಿ, ನಾಟ್ಯ, ವಿಮರ್ಶೆ ಹಾಗೂ ಭಾಷಾಂತರ ವಿಭಾಗದಲ್ಲಿ ಪರಿಣತಿ ಹೊಂದಿದ್ದ ಮಹಾನ್ ವಿದ್ವಾಂಸ. ಅವರು ರಚಿಸಿರುವ ತಿರುಮಲ ತಿರುಪತಿ ಸಂಗೀತ ಇತಿಹಾಸ ಕುರಿತ ಪುಸ್ತಕ ಅಪರೂಪ ಸಂಗ್ರಹ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಉದ್ಯಮಿ ಸಿ.ಎನ್. ರೆಡ್ಡಿ, ತಿರುಮಲ ತಿರುಪತಿ ದೇವಸ್ಥಾನದಲ್ಲಿ ದಲಿತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಲು ಶ್ರಮಿಸಿ ಸಮಾಜದ ಅಭ್ಯುದಯಕ್ಕೆ ಹೊಸ ಅಧ್ಯಾಯ ಬರೆದ ಪ್ರಭಾಕರ ಶಾಸ್ತ್ರಿ ಅವರು, ಗಾಂಧಿ ನಿರಶನಕ್ಕೆ ಬೆಂಬಲಿಸಿ ತಾವು ಧರಿಸಿದ್ದ ಜನಿವಾರವನ್ನೇ ಕಿತ್ತೆಸೆದ ಮಹನೀಯ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮುಕ್ತ ವಿವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್, ತೆಲುಗಿನ ಅನೇಕ ಗ್ರಂಥಗಳು ಕನ್ನಡಕ್ಕೆ ಅನುವಾದವಾಗಿವೆ. ಅವರಲ್ಲಿಯೂ ಅನೇಕರು ಉತ್ತಮ ಬರಹಗಾರರು ಇದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗೂ ಸಾಮಿಪ್ಯವಿದೆ. ಅಂತೆಯೆ ಕರ್ನಾಟಕ ಹಾಗೂ ಆಂಧ್ರಪ್ರದೇಶ ಸಂಬಂಧ ಕೂಡ ಉತ್ತಮವಾಗಿದೆ. ಈ ಎರಡು ರಾಜ್ಯಗಳು ಸುಂದರ ನಾಡು ಎಂದರು.
ಮುಕ್ತ ವಿವಿ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎನ್. ವಿಕ್ರಂರಾಜೇ ಅರಸ್ ಇದ್ದರು. ಅಧ್ಯಯನ ಕೇಂದ್ರಗಳ ಮುಖ್ಯಸ್ಥ ಪ್ರೊ. ಟಿ.ಡಿ. ದೇವೇಗೌಡ ಸ್ವಾಗತಿಸಿದರು. ತೆಲುಗು ವಿಭಾಗದ ಮುಖ್ಯಸ್ಥ ಡಾ. ಎಂ. ರಾಮನಾಥಂ ನಾಯುಡು ಪ್ರಾಸ್ತಾವಿಕ ಮಾತುಗಳಾಡಿದರು. ನಂತರ ತಜ್ಞರು ವಿಚಾರ ಮಂಡಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.