ಸಂಶೋಧಕರಿಗೆ ಏಕೆ ಎಂಬ ಪದ ಸ್ಫೂರ್ತಿ
ಮೈಸೂರು: ಏಕೆ ಎಂಬ ಪದ ಸಂಶೋಧಕನಿಗೆ ಸ್ಫೂರ್ತಿ ತುಂಬುತ್ತದೆ. ಇದಕ್ಕೆ ಉತ್ತರ ಸಿಕ್ಕ ಕೂಡಲೇ ಯಶಸ್ವಿಯಾದಂತಲ್ಲ. ಬದಲಿಗೆ ಮತ್ತೊಂದು ಏಕೆ ಬೆನ್ನ ಹಿಂದೆ ಬೀಳಬೇಕು ನಿರಂತರ ಏಕೆ ಎಂಬ ಪದದ ಹಿಂದೆ ಬೀಳುವುದೇ ವಿಜ್ಞಾನ ಎಂದು ರಾಮನ್ ಸಂಶೋಧನಾ ಸಂಸ್ಥೆ ವಿಶ್ರಾಂತ ನಿರ್ದೇಶಕ ಪ್ರೊ. ನರೇಂದ್ರ ಕುಮಾರ್ ಹೇಳಿದರು.
ಮೈಸೂರು ವಿವಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಸೆನೆಟ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ನಿತ್ಯವು ನಮ್ಮ ನಡುವೆಯೇ ನಡೆಯುವ ಪರಿಸರದ ಹಲವು ಚಟುವಟಿಕೆಗಳು ನೂರಾರು ಪ್ರಶ್ನೆಗಳಿಗೆ ಕಾರಣವಾಗುವಂತೆ ಮಾಡುತ್ತವೆ. ಹಗಲು ವೇಳೆ ಆಕಾಶ ನೀಲಿಯಾಗಿ ಕಾಣುವುದೇಕೆ, ಜತೆಗೆ ಸಮುದ್ರವೂ ನೀಲಿ ಬಣ್ಣವಾಗಿ ಗೋಚರಿಸುವುದೇಕೆ, ಅದು ಗಗನದ ಪ್ರತಿಬಿಂಬವೇ ನದಿ ವಕ್ರ ರೇಖೆಯಂತೆ ಹರಿಯುವುದೇಕೆ, ಸರಳ ರೇಖೆಯಲ್ಲೇಕೆ ಹರಿಯುವುದಿಲ್ಲ ಹೀಗೆ ನಿತ್ಯ ಚಟುವಟಿಕೆಯಲ್ಲಿ ನೂರಾರು ಪ್ರಶ್ನೆ ಮನಸ್ಸೊಳಗೆ ಬಂದು ಹೋಗುತ್ತವೆ.
ಇಂತಹ ಏಕೆ, ಹೇಗೆ, ಎಲ್ಲಿ ಏನು ಎಂಬ ಪ್ರಶ್ನೆಗಳಿಗೆ ಉತ್ತರ ನೀಡುವುದು ವಿಜ್ಞಾನ. ವಿಜ್ಞಾನ ನಿರಂತರ ಏಕೆ ಎಂಬ ಕುರಿತು ವಿಮರ್ಶೆ ಹಾಗೂ ಸಂಶೋಧನೆಯಲ್ಲೇ ತೊಡಗಿಕೊಳ್ಳುವಂತೆ ಮಾಡುತ್ತಿದೆ.
ಇದರ ನಡುವೆ ವಿದ್ಯಾರ್ಥಿಗಳ ಅನೇಕ ಏಕೆ ಎಂಬ ಪ್ರಶ್ನೆಗೆ ಪರಿಹಾರ ತಿಳಿಸಿದ ನರೇಂದ್ರಕುಮಾರ್, ಮೇಲಿಂದ ಕೆಳಗೆ ಬೀಳುವ ಬೆಕ್ಕು ಯಾವಾಗಲು ವಿರುದ್ಧ ಮುಖವಾಗಿ ಬೀಳುವುದಿಲ್ಲ. ತನ್ನ ಕಾಲುಗಳು ಕೆಳಮುಖವಾಗಿ ಇರುವಂತೆಯೇ ಬೀಳುತ್ತದೆ. ಇದಕ್ಕೆ ಕಾರಣ ಹುಡುಕುತ್ತ ಹೋದರೆ, ನೈಸರ್ಗಿಕ ಶಕ್ತಿ ಮನಗಾಣಬಹುದು. ಇದರಂತೆಯೇ ಆಕಾಶದಲ್ಲಿ ತೇಲುವ ಮೋಡಗಳೂ ಭೂಮಿಯ ಮೇಲೆ ಬೀಳುವುದಿಲ್ಲ. ಇವೆಲ್ಲಾ ನೈಸರ್ಗಿಕ ಕ್ರಿಯೆಯಾದರೂ, ವೈಜ್ಞಾನಿಕವಾಗಿ ಚಿಂತಿನೆ ನಡೆಸಿ ಸಂಶೋಧನೆ ಕೈಗೊಂಡರೆ ಆಶ್ಚರ್ಯಕರ ಉತ್ತರ ಸಿಗುತ್ತವೆ ಎಂದರು. ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ಕುಲಸಚಿವ ಪ್ರೊ. ಪಿ.ಎಸ್. ನಾಯಕ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.