ಎಚ್.ಡಿ. ಕೋಟೆ: ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ಕಂಡುಬರುತ್ತಿದ್ದು ಪತ್ರಕರ್ತರು ಜನತೆಯನ್ನು ಭ್ರಷ್ಟಾಚಾರದಿಂದ ದೂರ ಇಡುವಂತೆ ಮಾಡಬೇಕು ಎಂದು ಲೋಕಾಯುಕ್ತ ಎಸ್ಪಿ ಜಗದೀಶ್ ಪ್ರಸಾದ್ ಹೇಳಿದರು. ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಪೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಕ್ರಮ ಆಸ್ತಿ, ಕಚೇರಿಯಲ್ಲಿ ಹಣ ಸುಲಿಗೆ ಕಂಡು ಬಂದಾಗ ಲೋಕಾಯುಕ್ತರು ನೇರವಾಗಿ ದಾಳಿ ನಡೆಸಿ ಕ್ರಮ ಕೈಗೊಳ್ಳಬಹುದು.ಸರ್ಕಾರದ ಹಣ ದುರುಪಯೋಗ, ಸರ್ಕಾರಿ ಹಣದ ದುಂದುವೆಚ್ಚ, ಸರ್ಕಾರಿ ನಿಯಮ ಪಾಲಿಸದೇ ಇರುವುದು ಇಂತಹ ವೇಳೆಯಲ್ಲಿ ಕ್ರಮ ಕೈಗೊಳ್ಳಲು ಸಾರ್ವಜನಿಕರಿಂದ ದೂರು ಬರಬೇಕು ಎಂದರು. ತಾಲೂಕಿನ ಎನ್.ಬೇಗೂರು ವ್ಯಾಪ್ತಿಯ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕೇರಳಕ್ಕೆ ಜಾನುವಾರು ಸಾಗಣೆಯಾಗುತ್ತಿದೆ. ಸರಗೂರು ಪಟ್ಟಣದ ಸರ್ವೆ ನಂ.208 ರಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ತಾ.ಪಂ ಕಾಮಗಾರಿಯಲ್ಲಿ ಹಣ ದುರುಪಯೋಗ ಸೇರಿದಂತೆ 15ಕ್ಕೂ ಹೆಚ್ಚು ದೂರುಗಳು ಕೇಳಿಬಂದವು. ಈ ಬಗ್ಗೆ ಪ್ರತಿಕ್ರಿಯಿಸಿ, ಇಲಾಖೆ ವತಿಯಿಂದ ಮಾಹಿತಿ ಪಡೆಯಲಾಗುವುದು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.