'ಅಖಂಡ ಕರ್ನಾಟಕಕ್ಕೆ ಶ್ರಮಿಸಿದ ಕೋ.ಚೆನ್ನಬಸಪ್ಪ'
ಮೈಸೂರು: ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದವರಲ್ಲಿ ಕೋ.ಚೆನ್ನಬಸಪ್ಪ ಅವರು ಸಹ ಒಬ್ಬರು ಎಂದು ಸಾಹಿತಿ ಡಾ. ಸಿಪಿಕೆ ಶ್ಲಾಘಿಸಿದರು.
ಕಲಾ ಮಂದಿರದ ಮನೆಯಂಗಳದಲ್ಲಿ ಶುಕ್ರವಾರ ಕರ್ನಾಟಕ ಕಾವಲು ಪಡೆಯ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಕೋ. ಚೆನ್ನಬಸಪ್ಪ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಬಳ್ಳಾರಿಯನ್ನು ಕರ್ನಾಟಕಕ್ಕೆ ಉಳಿಸಿದವರಲ್ಲಿ ಚೆನ್ನಬಸಪ್ಪ ಅವರ ಕೊಡುಗೆ ಅನನ್ಯ. ಹಾಗೆಯೇ ಅಖಂಡ ಕರ್ನಾಟಕ್ಕಾಗಿ ಹೋರಾಡಿದ ಪ್ರಮುಖರಲ್ಲಿ ಇವರು ಸಹ ಒಬ್ಬರು. ಸಾಹಿತ್ಯ ಹಾಗೂ ವ್ಯಕ್ತಿತ್ವ ಎರಡರಲ್ಲೂ ದೊಡ್ಡವರಾದ ಇವರ ಸಾಹಿತ್ಯದಲ್ಲಿ ಆಧ್ಯಾತ್ಮಿಕತೆಯ ಆಯಾಮವಿದೆ. ಸಾಹಿತ್ಯದಲ್ಲಿ ತಪೋವೃದ್ಧರು ಎಂದರು. ವಕೀಲರಾಗಿ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ಇವರು, ಸ್ವಾತಂತ್ರ್ಯ ಹೋರಾಟಗಾರರಾಗಿ ಸೆರೆವಾಸ ಅನುಭವಿಸಿದವರು. 'ರೈತ' ಎಂಬ ಪ್ರಗತಿಪರ ಪತ್ರಿಕೆಯನ್ನು 14 ವರ್ಷಗಳ ಕಾಲ ನಡೆಸಿದವರು. ಕುವೆಂಪು ಅವರ ಆತ್ಮೀಯತೆ ಗಳಿಸಿದವರು. ಇಂದಿನ ಪತ್ರಿಕೆಗಳಿಗೆ ಅನಾಚಾರ, ಅತ್ಯಾಚಾರ, ಭ್ರಷ್ಟಾಚಾರ ಸುದ್ದಿಗಳೇ ಪ್ರಮುಖವಾಗಿದೆ. ಒಳ್ಳೆಯ ವಿಚಾರಗಳಿಗೊ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಉತ್ತರಾಧಿಕಾರಿ: ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಾನು ಕೋಚೆ ಅವರ ಉತ್ತರಾಧಿಕಾರಿ ಆಗಬೇಕಿತ್ತು. ಆದರೆ 20 ವರ್ಷ ನನಗಿಂತ ದೊಡ್ಡವರಾದ ಅವರು ನನ್ನ ಉತ್ತರಾಧಿಕಾರಿಯಾಗಿರುವುದು ಆಶ್ಚರ್ಯ ತರಿಸಿದೆ. ಕನ್ನಡದ ಕೆಲಸಗಳು ಅವರಿಂದ ಸಮರ್ಥವಾಗಿ ನಡೆಯಲಿ ಎಂದು ಆಶಿಸಿದ ಸಿಪಿಕೆ, ಬಿಜಾಪುರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಳ್ಳಾರಿಯ ಕೋಚೆ ಅವರನ್ನು ಕಾವಲು ಪಡೆಯು ಮೈಸೂರಿನಲ್ಲಿ ಸನ್ಮಾನಿಸಿದ್ದು ಅಭಿನಂದನೀಯ ಎಂದರು. ಕಾರ್ಯಕ್ರಮವನ್ನು ಸಾಹಿತಿ ಜರಗನಹಳ್ಳಿ ಶಿವಶಂಕರ್ ಉದ್ಘಾಟಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ, ಕೋಚೆ ಬದುಕು ಬರಹ ಕುರಿತು ಮಾತನಾಡಿದರು. ಸಾಹಿತಿ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳಾಡಿದರು. ಕಾವಲುಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್ಕುಮಾರ್ಗೌಡ ಅಧ್ಯಕ್ಷತೆ ವಹಿಸಿದ್ದರು. ಟಿ.ಲೋಕೇಶ್ ಹುಣಸೂರು ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಡಾ. ವೈ.ಡಿ. ರಾಜಣ್ಣ ನಿರೂಪಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.