ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಖಾದಿ ಗ್ರಾಮೋದ್ಯೋಗಕ್ಕೆ 750 ಕೋಟಿ

Parashurama
Updated On : 25 Jan 2013, 10:54 am

ಮೈಸೂರು:  ದೇಶದಲ್ಲಿ ಖಾದಿ ಗ್ರಾಮೋದ್ಯೋಗ ಕೈಗಾರಿಕೆಗಳ ಪುನಶ್ಚೇತನಕ್ಕೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ 750 ಕೋಟಿ ಮೃದು ಸಾಲ ನೀಡಿದೆ ಎಂದು ಕೇಂದ್ರ ಸಣ್ಣ ಕೈಗಾರಿಕೆಗಳ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾದಿ ಮಂಡಳಿಯ ಮೂಲಕ ಈ ಸಾಲಸೌಲಭ್ಯ ಒದಗಿಸಲಾಗುವುದು. ಈಗಾಗಲೇ ಅಗತ್ಯವಿರುವ ಕೈಗಾರಿಕೆಗಳ ಪಟ್ಟಿ ಮಾಡಲಾಗುತ್ತಿದೆ ಎಂದರು.
ಈ ಸಾಲ ಸೌಲಭ್ಯವನ್ನು ಬಳಸಿ ಸಣ್ಣ ಕೈಗಾರಿಕೆಗಳು ಆಧುನೀಕರಣಕ್ಕೆ ಕೈಹಾಕಬಹುದು. ಈಗ ಸಣ್ಣ ಕೈಗಾರಿಕೆಗಳು ಉತ್ಪಾದಿಸುವ ಶೇ.40ರಷ್ಟು ವಸ್ತುಗಳ ರಫ್ತಾಗುತ್ತಿವೆ. ಇದನ್ನು ಶೇ.50 ರಷ್ಟಕ್ಕೆ ಏರಿಸುವ ಗುರಿ ಇದೆ. ನಮ್ಮ ದೇಶದ ಸಣ್ಣ ಕೈಗಾರಿಕೆಗಳು ಅಷ್ಟರಮಟ್ಟಿಗೆ ಗುಣಮಟ್ಟವನ್ನೂ ಕಾಪಾಡುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಧಿ ಜಯಂತಿ ಅಂಗವಾಗಿ ಮಾತ್ರ ಖಾದಿ ವಸ್ತುಗಳಿಗೆ ರಿಯಾಯ್ತಿ ನೀಡಲಾಗುತ್ತಿತ್ತು. ಇನ್ನು ಮುಂದೆ ಖಾದಿ ವಸ್ತುಗಳಿಗೆ ಮಾರುಕಟ್ಟೆ ಅಭಿವೃದ್ಧಿ ಪ್ರೋತ್ಸಾಹ ಎಂದು ವರ್ಷವಿಡಿ ಶೇ.20 ರಷ್ಟು ರಿಯಾಯ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು. ದೇಶದಲ್ಲಿ 650 ಜಿಲ್ಲೆಗಳಿದ್ದು, ಪ್ರಸ್ತುತ ಪ್ರತಿ ಜಿಲ್ಲೆಯಿಂದ 100 ಯುವಕರಿಗೆ ಪ್ರಧಾನಮಂತ್ರಿಗಳ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಬರುವ ವರ್ಷಗಳಲ್ಲಿ ಈ ಸಂಖ್ಯೆಯನ್ನು 200ಕ್ಕೆ ಏರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಪಿಎಂಇಜಿಎಸ್ನಲ್ಲಿ ಯುವಕರಿಗೆ 12,000 ಕೋಟಿ ನೆರವು ನೀಡಲಾಗುತ್ತಿದೆ. ಉದ್ಯಮ ಸ್ಥಾಪಿಸಲು ಮುಂದಾಗುವ ಯುವಕರಿಗೆ ಯಾವುದೇ ಖಾತ್ರಿಯಿಲ್ಲದೇ 25 ಲಕ್ಷ ಸಾಲ ನೀಡಲಾಗುತ್ತಿದೆ. ಇದರಲ್ಲಿ ಪ.ಜಾತಿ, ವರ್ಗ, ಗ್ರಾಮೀಣ ಪ್ರದೇಶ, ಸಾಮಾನ್ಯ ವರ್ಗ- ಹೀಗೆ ವಿವಿಧ ವರ್ಗಗಳಲ್ಲಿ ರಿಯಾಯ್ತಿ ನೀಡಲಾಗುತ್ತಿದೆ. ಪ್ರಸ್ತುತ 650 ಜಿಲ್ಲೆಗಳಲ್ಲಿಯೂ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಇದನ್ನು 3 ತಿಂಗಳಲ್ಲಿ ಪೂರೈಸಿ, ನಾಲ್ಕನೇ ತಿಂಗಳಲ್ಲಿ ಸಾಲ ಮಂಜೂರು ಮಾಡಲಾಗುವುದು. ಈ ರೀತಿ ಮಾಡುವುದರಿಂದ ಪ್ರತಿಯೊಂದು ಘಟಕದಲ್ಲಿಯೂ 8 ಮಂದಿ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಅವರು ತಿಳಿಸಿದರು.
ಖಾದಿ ಗ್ರಾಮೋದ್ಯೋಗಕ್ಕೆ ಉತ್ತೇಜನ ನೀಡಬೇಕು ಎಂಬುದು 1920 ರಿಂದಲೂ ಮಹಾತ್ಮಗಾಂಧಿ ಅವರ ಆಶಯವಾಗಿತ್ತು. 1956 ರಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿ ರಚನೆಯಾಯಿತು. ಇದರ ವ್ಯಾಪ್ತಿಗೆ ಹತ್ತಿ, ರೇಷ್ಮೆ ಹಾಗೂ ಉಣ್ಣೆ ಕೈಗಾರಿಕೆಗಳ ಬರುತ್ತಿದ್ದವು. 2004 ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಮಾರ್ಗದರ್ಶನದಲ್ಲಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಸಣ್ಣ, ಸೂಕ್ಷ್ಮ, ಮಧ್ಯಮ ಕೈಗಾರಿಕೆ ಇಲಾಖೆ ಎಂದು ಹೆಸರಿಸಿದರು. ಖಾದಿ ಗ್ರಾಮೋದ್ಯೋಗ ಮಂಡಳಿಯ ವ್ಯಾಪ್ತಿಯಲ್ಲಿ 1.60 ಕೋಟಿ ಘಟಕಗಳಿವೆ. ಅಸಂಘಟಿಕ ಘಟಕಗಳು ಸೇರಿದರೆ 5 ಕೋಟಿ ಮಂದಿಗೆ ಉದ್ಯೋಗ ದೊರೆತಿದೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ 11,000 ಕೋಟಿ ಒದಗಿಸಲಾಗಿತ್ತು. 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ 24,000 ಕೋಟಿಗೆ ಏರಿಸಲು ಚಿಂತನೆ ನಡೆದಿದೆ ಎಂದು ಅವರು ಹೇಳಿದರು. 2007ರಿಂದ ಕೇಂದ್ರ ಸರ್ಕಾರ ನೀಡುತ್ತಿರುವ ಉತ್ತೇಜನದಿಂದ ಶೇ.82 ರಿಂದ 85 ರಷ್ಟು ಸಣ್ಣ ಕೈಗಾರಿಕೆಗಳು  ಉತ್ತಮವಾಗಿ ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಣ್ಣ, ಸದಸ್ಯ ಕೃಷ್ಣಮೂರ್ತಿ, ಮಾಜಿ ಮೇಯರ್ ವಾಸು, ಮೈಸೂರು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಸುರೇಶ್ಕುಮಾರ್ ಜೈನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments