ವರ್ಮಾ ವರದಿ ಸಂಸತ್ನಲ್ಲಿ ಚರ್ಚಿಸಿ
ಮೈಸೂರು: ನ್ಯಾ. ಜೆ.ಸಿ. ವರ್ಮಾ ಅವರ ವರದಿ ಬಗ್ಗೆ ಸಂಸತ್ ಕಲಾಪದಲ್ಲಿಯೂ ಚರ್ಚಿಸಿ, ಜಾರಿಗೊಳಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಆಗ್ರಹಿಸಿದರು.
ಜಿಲ್ಲಾ ಪತ್ರಕರ್ತರ ಸಂಘವು ಶುಕ್ರವಾರ ಜೆ.ಸಿ. ವರ್ಮಾ ವರದಿ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವರದಿಯಿಂದ ಹೊಸ ಮನ್ವಂತರ ಆಗುವ ನಿರೀಕ್ಷೆ ಇಲ್ಲ. ಇರುವ ಕಾನೂನನ್ನೇ ಅಲ್ಪಸ್ವಲ್ಪ ತಿದ್ದುಪಡಿ ಮಾಡಿದಂತೆ ಇದೆ. ಆದ್ದರಿಂದ ಈ ಬಗ್ಗೆ ಸಂಸತ್ ಕಲಾಪದಲ್ಲಿಯೂ ಚರ್ಚೆ ಆಗಬೇಕು. ರಾಜ್ಯದಲ್ಲಿ 17 ವರ್ಷ ವಯಸ್ಸಿನ ಯುವಕರು ಅಪರಾಧ ಮಾಡಿದ ಶೇ.78ರಷ್ಟು ಪ್ರಕರಣಗಳು ಕಣ್ಣ ಮುಂದಿದೆ. ಆದರೂ ಬಾಲಪರಾಧಿಗಳ ವಯಸ್ಸು ಇಳಿಕೆ ಮಾಡಬಾರದು ಎಂದು ಹೇಳಿರುವುದು ಸರಿಯಲ್ಲ ಎಂದರು. ಲೇಖಕಿ ಪ್ರೊ. ಆರ್.ಇಂದಿರಾ ಮಾತನಾಡಿ, ಈಗಿರುವ ಕಾಯ್ದೆಗಳನ್ನೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ದೆಹಲಿ ಅತ್ಯಾಚಾರ ಪ್ರಕರಣ ಸೇರಿದಂತೆ ಯಾವುದೇ ಇಂತಹ ಪ್ರಕರಕ್ಕೆ ಆಡಳಿತ ಸಂಸ್ಥೆ ಅಥವಾ ಒಂದು ಇಲಾಖೆ ಹೊಣೆಯನ್ನಾಗಿ ಮಾಡುವ ಬದಲು ಸಮಾಜವೂ ಸಹ ಹೊಣೆ ಹೊರಬೇಕು. ಇಂತಹ ಪ್ರಕರಣಗಳಲ್ಲಿ ಕಾನೂನಿನ ದುರುಪಯೋಗವಾಗಿದ್ದರೂ ಸಹ ಆ ಸಂಖ್ಯೆ ಕಡಿಮೆ ಇದೆ. ಇಂತಹ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸುವ ಅಗತ್ಯವಿಲ್ಲ. ಬದಲಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.
ವರ್ಮಾ ಆಯೋಗದ ವರದಿಯ ಪ್ರಮುಖ ಅಂಶಗಳನ್ನು ವಿವರಿಸಿದ ವಕೀಲ ಆ.ಮ. ಭಾಸ್ಕರ್ ಮಾತನಾಡಿ, ಬಾಲಾಪರಾಧಿಗಳ ವಯಸ್ಸಿನ ಇಳಿಕೆ ವಿಷಯದಲ್ಲಿ ವರ್ಮಾ ನಿಲುವನ್ನು ಸ್ವಾಗತಿಸುತ್ತೇನೆ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ಕಾರ್ಯದರ್ಶಿ ಸುಬ್ರಹ್ಮಣ್ಯ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.