ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಒಮ್ಮತ
ಮೈಸೂರು: ನಗರದ ನಾರಾಯಣಶಾಸ್ತ್ರಿ ರಸ್ತೆಯ ನಿರಂಜನ ಮಠದ ಜಾಗದಲ್ಲಿ ಸ್ವಾಮಿ ವಿವೇಕಾನಂದರ ಸ್ಮಾರಕ ಮತ್ತು ಸಾಂಸ್ಕೃತಿಕ ಯುವ ಕೇಂದ್ರ ಸ್ಥಾಪಿಸಲು ಶುಕ್ರವಾರ ಶ್ರೀರಾಮಕೃಷ್ಣ ಆಶ್ರಮದಲ್ಲಿ ನಡೆದ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಸುರೇಶಾನಂದಜಿ ಅಧ್ಯಕ್ಷತೆ ನಡೆದ ಸಭೆಯಲ್ಲಿ ನಗರದ ಹಲವು ಸಾಹಿತಿಗಳು, ನಾಗರಿಕರು ಸ್ಮಾರಕ ನಿರ್ಮಾಣಕ್ಕೆ ಒಲವು ವ್ಯಕ್ತಪಡಿಸಿದರು.
ಸಾಹಿತಿ ಡಾ. ಪ್ರಭುಶಂಕರ ಮಾತನಾಡಿ, ಒಳ್ಳೆಯ ಕೆಲಸಕ್ಕೆ ಅಡ್ಡಿ- ಆತಂಕಗಳು ಎದುರಾಗುವುದು ಸಹಜ. ವಿವೇಕಾನಂದರ ಜೀವನ ಸಂದೇಶ ಜನಸಾಮಾನ್ಯರಿಗೆ ತಲುಪಿಸಿ ದೇಶದ ಸತ್ಪ್ರಜೆಗಳನ್ನಾಗಿ ಮಾಡಲು ಸ್ಮಾರಕ ನೆರವಾಗಲಿದೆ. ಹೀಗಾಗಿ, ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಂಡು ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ವಿಶ್ರಾಂತ ಕುಲಪತಿ ಡಾ. ಕೆ.ಚಿದಾನಂದಗೌಡ ಮಾತನಾಡಿ, ಮೌಲ್ಯಯುತ ಜೀವನ ಕಟ್ಟಿಕೊಳ್ಳಲು ಆದರ್ಶ ವ್ಯಕ್ತಿಗಳ ಕೇಂದ್ರಗಳನ್ನು ಸ್ಥಾಪಿಸಿ ಶಿಕ್ಷಣ ನೀಡಬೇಕು. ಮೈಸೂರಿನಲ್ಲಿ ಸ್ಥಾಪಿತವಾಗುತ್ತಿರುವ ಈ ಕೇಂದ್ರದಿಂದ ಸ್ಥಳೀಯರಿಗೆ ಲಾಭವಾಗುತ್ತದೆ ಎಂದರು.
ಸಾಹಿತಿ ಡಾ.ಸಿಪಿಕೆ ಮಾತನಾಡಿ, ವಿವೇಕಾನಂದರು ನೀಡಿದ ಜ್ಞಾನದ ಮುಂದೆ ಎನ್ಟಿಎಂಎಸ್ ಶಾಲೆಯಲ್ಲಿ ನಡೆಯುತ್ತಿರುವ ಜ್ಞಾನಬುತ್ತಿ ನೀಡುವ ಜ್ಞಾನ ಏನೇನು ಇಲ್ಲ. ಆ ಸಂಸ್ಥೆಗೆ ಜಾಗ ಬೇಕೆಂದರೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಕೇಂದ್ರಕ್ಕೆ ಅಡ್ಡಿಯುಂಟು ಮಾಡಬಾರದು ಎಂದು ಕೋರಿದರು.
ನಾಡೋಜ ಡಾ.ದೇಜಗೌ ಮಾತನಾಡಿ, ವಿಶ್ವದ ಎಲ್ಲ ಮತ ಧರ್ಮಗಳ ಸಾರ ಸಂಗ್ರಹವೇ ಸ್ವಾಮಿ ವಿವೇಕಾನಂದರು. ಅವರು ಎಂದೂ ಜಾತಿಯನ್ನು ಮಾಡಲಿಲ್ಲ.
ಮಹಾತ್ಮಗಾಂಧಿ, ನೇತಾಜಿ ವಿವೇಕಾನಂದರಿಂದ ಪ್ರೇರೇಪಣೆ ಪಡೆದಿದ್ದಾರೆ. ಆದ್ದರಿಂದ ಕೇಂದ್ರ ಸ್ಥಾಪನೆ ವಿಚಾರದಲ್ಲಿ ಎಲ್ಲರೂ ಸಣ್ಣತನ ಪ್ರದರ್ಶಿಸದೆ, ದೊಡ್ಡತನದಿಂದ ಸ್ಮಾರಕ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು. ಸತ್ಯೇಶಾದನಂದಜಿ, ಹಿರಿಯ ವಕೀಲ ಎಂ.ಎಸ್. ಸಂಪತ್ ಅಯ್ಯಂಗಾರ್, ಮಾಜಿ ಶಾಸಕ ಡಿ.ಮಾದೇಗೌಡ, ಡಾ. ಸುದರ್ಶನ್, ಮಾಜಿ ಪಾಲಿಕೆ ಸದಸ್ಯ ಡಿ. ನಾಗಭೂಷಣ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.