ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಡಮ್ಮಿ ಲೀಡರ್
ನಂಜನಗೂಡು: ಪ್ರತಿಪಕ್ಷ ನಾಯಕ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ವಿಫಲರಾಗಿರುವ ಸಿದ್ದರಾಮಯ್ಯ, ಪಕ್ಷದಲ್ಲಿ ಇರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಗಳಿಸಲು ಸಾಧ್ಯವೇ ಇಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಮಾಜಿ ಸಚಿವ ಎಂ.ಮಹದೇವ್ ಭವಿಷ್ಯ ನುಡಿದಿದ್ದಾರೆ.
ತಮ್ಮ ಜವಾಬ್ದಾರಿ ಮರೆತಿರುವ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವ ಪ್ರಯತ್ನ ಮಾಡುವುದನ್ನು ಬಿಟ್ಟು, ಬೀದಿ ಬೀದಿಯಲ್ಲಿ ಬಾಯಿ ಬಡಿದುಕೊಂಡರೆ ಪ್ರಯೋಜನವಾದರೂ ಏನು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸರ್ವಾಧಿಕಾರಿ ಧೋರಣೆ ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯ ನಾಯಕತ್ವವನ್ನು ಮೂಲ ಕಾಂಗ್ರೆಸ್ಸಿಗರು ಎಂದಿಗೂ ಒಪ್ಪುವುದಿಲ್ಲ. ಕಾಂಗ್ರೆಸ್‌ನಲ್ಲಿ ಅವರೊಬ್ಬ ಡಮ್ಮಿ ನಾಯಕ. ನನ್ನ ಅಭಿಪ್ರಾಯ ಸುಳ್ಳು ಎನ್ನುವುದಾದರೆ ಸಿದ್ದರಾಮಯ್ಯ ನಮ್ಮ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಘೋಷಿಸಲಿ ಎಂದು ಅವರು ಸವಾಲೆಸೆದರು.
ಐಸಿಯುನಲ್ಲಿ ಸರ್ಕಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಡುವಿನ ಸಂಘರ್ಷದ ಪರಿಣಾಮ ರಾಜ್ಯದಲ್ಲಿ ಅರಾಜಕತೆ ಮನೆ ಮಾಡಿದೆ. ಸರ್ಕಾರ ಐಸಿಯುನಲ್ಲಿದೆ. ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರಾದರೂ ಸಮ್ಮನಿರದೆ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿನ ಅರಾಜಕತೆಗೆ ಅಪ್ರತ್ಯಕ್ಷವಾಗಿ ಬಿಎಸ್‌ವೈ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್ ಕಾರಣ. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಬಿಎಸ್‌ವೈ ಅವರನ್ನು ಕಾಂಗ್ರೆಸ್, ಸಾಯಲುಬಾರದು, ಇಲ್ಲವೆ ಬದುಕಲುಬಾರದು ಎಂಬ ಸ್ಥಿತಿಯಲ್ಲಿಟ್ಟಿದೆ.
ಶೆಟ್ಟರ್‌ಗೆ ಕೇವಲ ಬಜೆಟ್ ಮಂಡಿಸುವುದೊಂದೆ ದೊಡ್ಡ ಸಾಧನೆ ಎಂದು ತೋರುತ್ತಿದೆ. ಶೆಟ್ಟರ್ ಬಜೆಟ್ ಮಂಡನೆಗೆ ವಿಘ್ನ ಉಂಟು ಮಾಡುವುದೆ ದೊಡ್ಡ ಸಾಹಸ ಎಂದು ಬಿಎಸ್‌ವೈ ತಿಳಿದಂತಿದೆ. ಇಂತಹ ರಾಜಕೀಯ ಸಂಕಷ್ಟ ಹಿಂದೆಂದೂ ಕಂಡಿರಲಿಲ್ಲ. ಅಸಹಾಯಕ ಜನತೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಮತ್ತು ಎಚ್.ಡಿ. ಕುಮಾರಸ್ವಾಮಿ ನಾಯಕತ್ವದಲ್ಲಿ ಸಹಜವಾಗಿಯೆ ಒಲವು ತೋರುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ನೆಲಕಚ್ಚುವ ಕೆಜೆಪಿ: ಜಾತಿ ರಾಜಕಾರಣ ಮತ್ತು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಯಡಿಯೂರಪ್ಪ ವೀರಶೈವ ಸಮಾಜವನ್ನು ಗುತ್ತಿಗೆ ಪಡೆದವರಂತೆ ಆಡುತ್ತಿದ್ದಾರೆ. ಬಸವ ತತ್ವಕ್ಕೆ ವಿರುದ್ಧವಾಗಿ ಪರಧನ - ಪರಸತಿ ಎಂಬ ತತ್ವದ ಮೇಲೆ ನಿಂತಿರುವ ಕೆಜೆಪಿ ಮುಂಬರುವ ಚುನಾವಣೆಯಲ್ಲಿ 10 ರಿಂದ 12 ಸ್ಥಾನ ಪಡೆದು ನೆಲಕಚ್ಚುವುದು ಖಂಡಿತ. ನಾಲ್ಕಾರು ದಶಕಗಳಿಂದ ಬಿಜೆಪಿಯಲ್ಲಿ ಕೋಮುವಾದಿ ಶಿಕ್ಷಣ ಪಡೆದ ಯಡಿಯೂರಪ್ಪ ಈಗ ಜಾತ್ಯತೀತ ಫೋಸ್ ಕೊಟ್ಟರೆ ಜನ ನಂಬುವುದಿಲ್ಲ ಎಂದು ಮಹದೇವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಜ.30 ರಿಂದ ಫೆ.9 ರವರೆಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ನಿರಂತರ ಪ್ರಚಾರದಲ್ಲಿ ತೊಡಗುವುದಾಗಿ ಮಹದೇವ್ ಇದೆ ಸಂದರ್ಭದಲ್ಲಿ ತಮ್ಮ ಪ್ರವಾಸದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕಳಲೆ ಕೇಶವಮೂರ್ತಿ, ಮುಖಂಡರಾದ ವಕೀಲ ಮುರುಳಿ, ದೇಬೂರು ಪಾಂಡು ಮತ್ತು ಗಂಗಾಧರ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.