ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕ್ರೀಡಾ ಹಾಸ್ಟೆಲ್‌ಗೆ ವಾರ್ಡನ್ ಇಲ್ಲ!

Parashurama
Updated On : 29 Jan 2013, 12:11 pm

ಮೈಸೂರು: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಸೀನಿಯರ್ ಮತ್ತು ಜೂನಿಯರ್ ಕ್ರೀಡಾ ವಿದ್ಯಾರ್ಥಿನಿಲಯಕ್ಕೆ ಕಳೆದ ಒಂದು ವರ್ಷದಿಂದ ವಾರ್ಡನ್ ಇಲ್ಲದೆ ನಿರ್ವಹಣೆ ದುಸ್ತರವಾಗಿದೆ.
5 ರಿಂದ 7ನೇ ತರಗತಿ ವರೆಗಿನ ಕ್ರೀಡಾಪಟುಗಳಿರುವ ಜೂನಿಯರ್ ವಿದ್ಯಾರ್ಥಿನಿಲಯದಲ್ಲಿ 16 ಬಾಲಕಿಯರು, 20 ಬಾಲಕರು ಹಾಗೂ ಪ್ರಥಮ ಪಿಯುಸಿಯಿಂದ ಪದವಿವರೆಗಿನ ಕ್ರೀಡಾಪಟುಗಳಿರುವ ಸೀನಿಯರ್ ವಿದ್ಯಾರ್ಥಿನಿಲಯದಲ್ಲಿ ಒಟ್ಟು 77 ಯುವತಿಯರು ವಾಸಿಸುತ್ತಿದ್ದಾರೆ. ಇವರನ್ನು ನೋಡಿಕೊಳ್ಳಲು ವಾರ್ಡನ್ ಇಲ್ಲದಂತಾಗಿದೆ. ಈಗ ಇಲಾಖೆ ಕಚೇರಿಯ ವ್ಯವಸ್ಥಾಪಕರೇ ತಾತ್ಕಾಲಿಕ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಕಚೇರಿ ಕೆಲಸ ಮತ್ತು ನಿಲಯಪಾಲಕ ಹುದ್ದೆಗಳಿಂದ ಒತ್ತಡ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರೂ, ಬೇಡಿಕೆ ಮಾತ್ರ ಈಡೇರಿಲ್ಲ.
ಈ ವಿದ್ಯಾರ್ಥಿ ನಿಲಯಗಳಲ್ಲಿರುವ ಕ್ರೀಡಾಪಟುಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಲು ಈಗಿರುವ ವಾರ್ಡನ್ ಕೈಯಲ್ಲಿ ಆಗುತ್ತಿಲ್ಲ. ಅಲ್ಲದೇ ಇಲಾಖೆಯ ಸಹಾಯಕ ನಿರ್ದೇಶಕರೂ ಸಹ ಇದರ ಹೊಣೆ ಹೊತ್ತಿದ್ದಾರೆ. ಜತೆಗೆ ತಾತ್ಕಾಲಿಕ ಸಿಬ್ಬಂದಿ ನೇಮಿಸಲಾಗಿದ್ದರೂ ಪೂರ್ಣಕಾಲಿಕ ಸಿಬ್ಬಂದಿ ಬೇಕಾಗಿದ್ದಾರೆ. ಇದರಿಂದ ಕ್ರೀಡಾಪಟುಗಳನ್ನು ಉತ್ತೇಜಿಸಲು, ಅವರಿಗೆ ಅಗತ್ಯ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ. ಸರ್ಕಾರವು ಸಹ ಮುತುವರ್ಜಿ ವಹಿಸಿ ಸಿಬ್ಬಂದಿ ನೇಮಿಸಬೇಕಿದೆ ಎಂದು ಸಹಾಯಕ ನಿರ್ದೇಶಕ ಕೆ. ಸುರೇಶ್ ಅವರು ಕನ್ನಡಪ್ರಭಕ್ಕೆ ತಿಳಿಸಿದರು.
ವೈದ್ಯಕೀಯ ಘಟಕ ಬೇಕು: ಕ್ರೀಡಾ ವಿದ್ಯಾರ್ಥಿ ನಿಲಯದಲ್ಲಿರುವ ಕ್ರೀಡಾಪಟುಗಳು ಶಾಲಾ- ಕಾಲೇಜು ತರಗತಿ ಮುಗಿಸಿ ಉಳಿದ ಸಮಯದಲ್ಲಿ ತರಬೇತಿ ಪಡೆಯುತ್ತಾರೆ. ಹೀಗೆ ತರಬೇತಿ ಪಡೆಯುವ ಸಂದರ್ಭದಲ್ಲಿ ಅವಘಡಗಳು ಸಂಭವಿಸಿದಲ್ಲಿ ತಕ್ಷಣ ತುರ್ತು ಚಿಕಿತ್ಸೆ ನೀಡಲು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವೈದ್ಯಕೀಯ ಘಟಕ ಇಲ್ಲದಂತಾಗಿದೆ. ಇದರಿಂದ ಅವಘಡಗಳು ಸಂಭವಿಸಿದಾಗ ಕ್ರೀಡಾಪಟುಗಳನ್ನು ಹತ್ತಿರದ ಶಾಂತವೇರಿ ಗೋಪಾಲಗೌಡ ಹಾಗೂ ಜೆಎಸ್‌ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಇದರಿಂದ ಸಮಯದ ಅಭಾವದಿಂದ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ನೀಡಲು ತಡೆ ಉಂಟಾಗುತ್ತಿದೆ.
ಜತೆಗೆ ಕ್ರೀಡಾಪಟುಗಳಿಗೆ ಪ್ರತ್ಯೇಕ ಫಿಸಿಷಿಯನ್ ಬೇಕು. ಕ್ರೀಡಾಪಟುಗಳಲ್ಲಿ ಕಾಣಿಸಿಕೊಳ್ಳುವ ರೋಗಗಳನ್ನು ಗುಣಪಡಿಸಲು ಅವರ ಸೇವೆ ಅಗತ್ಯವಿದೆ.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಕ್ರೀಡಾಪಟುಗಳ ಶಕ್ತಿಯ ಜತೆಗೆ ತಂತ್ರಜ್ಞಾನದ ಅವಶ್ಯಕತೆಯೂ ಇದೆ. ಆದ್ದರಿಂದ ವೈಜ್ಞಾನಿಕವಾಗಿ ಚಿಂತಿಸುವುದಾದರೆ ತಂತ್ರಜ್ಞಾನ ಪರಿಕರಗಳು, ಐಸ್ ಮೇಕರ್ಸ್ ತುಂಬಾ ಅವಶ್ಯವಿದೆ. ಕ್ರೀಡಾಪಟುಗಳನ್ನು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡೆಗಳಿಗೆ ಸಿದ್ಧಗೊಳಿಸಲು ಫಿಸಿಷಿಯನ್ ಬೇಕಿದೆ.
ತಾಲೂಕು ಕ್ರೀಡಾಂಗಣಗಳು ಅನಾಥ: ಮೈಸೂರು ಜಿಲ್ಲೆಯಲ್ಲಿ ಏಳು ತಾಲೂಕುಗಳಲ್ಲಿಯೂ ತಾಲೂಕು ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ ಹೊರತು ಅದರ ನಿರ್ವಹಣೆಗೆ ತಾಲೂಕು ಅಧಿಕಾರಿಗಳಿಲ್ಲ. ಈಗ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಯೇ ಇಲ್ಲದೆ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳನ್ನು ಉತ್ತೇಜಿಸಲು ತರಬೇತುದಾರರೂ ಇಲ್ಲ. ಒಟ್ಟಾರೆ ತಾಲೂಕು ಅಧಿಕಾರಿ, ತರಬೇತುದಾರರು, ಡಿ ಗ್ರೂಪ್ ನೌಕರರ ಅವಶ್ಯಕತೆ ಇದೆ.
-  ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments