ಕ್ರೀಡಾಕೂಟಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣ ಸಜ್ಜು
ಮೈಸೂರು: ಜಿಲ್ಲಾಡಳಿತ, ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಆಶ್ರಯದಲ್ಲಿ ಫೆ.1, 2ರಂದು ನಡೆಯುವ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ಸಜ್ಜಾಗಿದೆ.
ಫೆ.1ರ ಬೆಳಗ್ಗೆ 9.30ಕ್ಕೆ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸಲಿದ್ದು, ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಧ್ವಜಾರೋಹಣ ನೆರೇವರಿಸುವರು. ಫೆ.2ರ ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಹುಮಾನ ವಿತರಿಸಲಿದ್ದು, ಮೇಯರ್ ಎಂ.ಸಿ. ರಾಜೇಶ್ವರಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲಲಿತಾ ದೇವೇಗೌಡ ಸಮಾರೋಪ ಭಾಷಣ ಮಾಡುವರು ಎಂದು ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಾಮು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುದಾನಿತ, ಅನುದಾನ ರಹಿತ ಸಂಸ್ಥೆಗಳ ನೌಕರರು, ತರಬೇತುದಾರರು, ಕ್ರೀಡಾಧಿಕಾರಿಗಳು, ದೈಹಿಕ ಶಿಕ್ಷಣಾಧಿಕಾರಿಗಳು, ಪ್ಯಾರಾ ಮಿಲಿಟರಿ, ಪೊಲೀಸ್, ಆರ್ಪಿಎಫ್, ಯೂನಿಫಾರಂ ಸಿಬ್ಬಂದಿ, ಸರ್ಕಾರಿ ಸ್ವಾಮ್ಯಕ್ಕೆ ಒಳಪಡದ ಹಾಗೂ ಬ್ಯಾಂಕ್ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸುವಂತಿಲ್ಲ. ಕ್ರೀಡಾಕೂಟದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಅವರ ಕೇಂದ್ರ ಸ್ಥಾನದಿಂದ ಚಾಮುಂಡಿ ವಿಹಾರಕ್ಕೆ ಬಂದು ಹೋಗಲು ತಗಲುವ ಪ್ರಯಾಣ ದರವನ್ನು ಭರಿಸಲಾಗುವುದು. ಜತೆಗೆ ಈ ಎರಡು ದಿನಗಳ ಹಾಜರಿ ಕೊಡಿಸಲಾಗುವುದು. ಇಲ್ಲಿ ವಿಜೇತರಾದವರನ್ನು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು ಎಂದರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್ಬಾಲ್, ಟೆನಿಕಾಯ್ಟ್, ವೆಯ್ಟ್ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಬೆಸ್ಟ್ ಫೀಸಿಕ್ಸ್, ಚೆಸ್, ಥ್ರೋಬಾಲ್, ಮೈಸೂರು ವಿವಿಯ ಸ್ಫೋರ್ಟ್ಸ್ ಪೆವಿಲಿಯನ್ನಲ್ಲಿ ಫುಟ್ಬಾಲ್, ಹಾಕಿ, ಬ್ಯಾಡ್ಮಿಂಟನ್, ಕುಸ್ತಿ, ರೇಲ್ವೆ ನಿಲ್ದಾಣದ ರೋಟರಿ ಶಾಲೆಯಲ್ಲಿ ಟೇಬಲ್ ಟೆನ್ನಿಸ್, ಮೈಸೂರು ಟೆನ್ನಿಸ್ ಕ್ಲಬ್ನಲ್ಲಿ ಟೆನ್ನಿಸ್, ಧನ್ವಂತ್ರಿ ರಸ್ತೆಯ ನೌಕರರ ಭವನದಲ್ಲಿ ಕೇರಂ, ಬ್ರಿಡ್ಜ್, ಕುವೆಂಪುನಗರದ ಕನ್ನೇಗೌಡ ಕ್ರೀಡಾಂಗಣದಲ್ಲಿ ಕ್ರಿಕೆಟ್, ಸರಸ್ವತಿಪುರಂ ಈಜುಕೊಳದಲ್ಲಿ ಈಜು, ಕಲಾಮಂದಿರದಲ್ಲಿ ಕರಕುಶಲ ಪ್ರದರ್ಶನ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಹಿರಿಯ ನೌಕರರಿಗೆ ಪ್ರತ್ಯೇಕ ಕ್ರೀಡೆಗಳು ನಡೆಯಲಿವೆ. 45 ವರ್ಷ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಬ್ಯಾಡ್ಮಿಂಟನ್ ಸಿಂಗಲ್- ಡಬಲ್ಸ್, ಟೇಬಲ್ ಟೆನ್ನಿಸ್ ಸಿಂಗಲ್ಸ್, ಟೆನ್ನಿಸ್ ಸಿಂಗಲ್ಸ್, 40 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಬ್ಯಾಡ್ಮಿಂಟನ್ ಸಿಂಗಲ್, ಟೇಬಲ್ ಟೆನ್ನಿಸ್ ಸಿಂಗಲ್ಸ್, ಟೆನ್ನಿಕಾಯ್ಟ್ ಸಿಂಗಲ್ಸ್ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 26000 ನೌಕರರಿದ್ದು, 1500 ನೌಕರರು ಭಾಗವಹಿಸುವ ನಿರೀಕ್ಷೆ ಇದೆ. ಅದರಲ್ಲಿ 300 ರಿಂದ 400 ಮಂದಿ ಅಂಗವಿಕಲರಿದ್ದು, ಒಳಾಂಗಣ ಕ್ರೀಡೆಗಳಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ವಿವರಗಳಿಗೆ ದೂ. 0821- 2564179, 2427890, ಮೊ. 94482 53736 ಸಂಪರ್ಕಿಸಬಹುದು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್, ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್, ಸಂಘದ ಕ್ರೀಡಾ ಕಾರ್ಯದರ್ಶಿ ಎಂ.ಎಸ್. ಕುಮಾರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.