ದೇಗುಲ ಬದಲು ಶಿಕ್ಷಣಕ್ಕೆ ಅನುದಾನ ಕೇಳಿ
ಚಾಮರಾಜನಗರ: ಸಮುದಾಯ ಭವನ, ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೇಳುವುದರ ಬದಲೂ, ಅಂಗನವಾಡಿ, ಶಾಲೆಗಳಲ್ಲಿರುವ ಮೂಲ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಿಸಿಕೊಳ್ಳಬೇಕೆಂದು ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.
ಅವರು ನಗರದಲ್ಲಿ ಭಾನುವಾರ ಪೇಟೆ ಪ್ರೈಮರಿ ಶಾಲಾವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದು, ದೇವರಾಜ ಅರಸ್ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಾವನೂರ್ ವರದಿಯನ್ನು ಜಾರಿಗೆ ತಂದು, ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು, ಹಾಗೆಯೇ ವಿ.ಪಿ. ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಡಲ್ ಆಯೋಗ ಜಾರಿಗೆ ತಂದ ಪ್ರತಿಯೊಂದು ರಾಜ್ಯಗಳಲ್ಲೂ ಹಿಂದುಳಿದ ವರ್ಗಗಳವರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಸಮುದಾಯ ಭವನ, ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೇಳಬೇಡಿ ಎನ್ನುವುದಿಲ್ಲ, ಅದಕ್ಕಿಂತ ಮುಖ್ಯವಾಗಿ ಶಿಕ್ಷಣಕ್ಕೆ ಆದ್ಯತೆ ಕೊಡುವುದರ ಮೂಲಕ ನಿಮ್ಮ ಗ್ರಾಮಗಳಲ್ಲಿರುವ ಶಾಲೆ, ಅಂಗನವಾಡಿ ಸೇರಿದಂತೆ ಮೂಲಭೂತ ಸಮಸ್ಯೆಗಳಿದ್ದಲ್ಲಿ ಅದಕ್ಕೆ ಅನುದಾನ ಕೇಳಿ, ನಾನು ಸಂಸದನಾದ ಮೇಲೆ ಪ್ರತಿಯೊಂದು ತಾಲೂಕಿಗೂ ಸಮುದಾಯ ಭವನ ನಿರ್ಮಾಣ ಮಾಡಲು ತಲಾ 20 ಲಕ್ಷ ಅನುದಾನ ಬಿಡುಗಡೆ ಮಾಡಿದ್ದೇನೆ. ಈ ಸಂಬಂಧ ಚಾಮರಾಜನಗರದಲ್ಲೊಂದು ಸುಸಜ್ಜಿತ ಕನಕ ಸಮುದಾಯ ಭವನ ನಿರ್ಮಿಸಲು ಕುರುಬ ಸಮಾಜದ ಪದಾಧಿಕಾರಿಗಳು ಅನುದಾನ ಕೋರಿದ್ದಾರೆ ಅದರಂತೆ ಅಗತ್ಯವಿರುವ 25 ಲಕ್ಷ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ದಕ್ಷಿಣ ಭಾರತ ಪುಣ್ಯದ ಬೀಡು: ದಕ್ಷಿಣ ಭಾರತದಲ್ಲಿ ಹಲವಾರು ಸಮಾಜ ಸುಧಾರಕರು ಹುಟ್ಟಿ, ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅಂತಹವರಲ್ಲಿ 12ನೇ ಶತಮಾನದ ಭಕ್ತಿ ಭಂಡಾರಿ ಬಸವಣ್ಣ, ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ, ಕೇರಳದಲ್ಲಿ ನಾರಾಯಣಗುರು, ಮಹಾರಾಷ್ಟ್ರದಲ್ಲಿ ಬಿ.ಆರ್. ಅಂಬೇಡ್ಕರ್ ಅವರು ಪ್ರಮುಖರಾಗುತ್ತಾರೆ. ಜಾತೀಯತೆಯು ಈ ದೇಶದ ಶಾಪವಾಗಿದ್ದು, 16ನೇ ಶತಮಾನದಲ್ಲೇ ಕನಕದಾಸರು ಜಾತೀಯತೆ ವಿರುದ್ಧ ಸಮರ ಹೂಡಿದ್ದರು. ಆದರೆ ಉತ್ತರ ಭಾರತದಲ್ಲಿ ಸಮಾಜ ಸುಧಾರಕರು ಕಾಣಬರುವುದಿಲ್ಲ ಹಾಗಾಗೀ ಅಲ್ಲಿ ಇನ್ನು ಜಾತೀಯತೆ ಅಜ್ಞಾನ ತಾಂಡವವಾಡುತ್ತಿದೆ ಎಂದರು. ಮುಖ್ಯ ಭಾಷಣ ನೆರವೇರಿಸಿದ ಮೈಸೂರು ವಿವಿ ವಿಶ್ರಾಂತ ಕುಲಪತಿ ಎಚ್.ಜೆ. ಲಕ್ಕಪ್ಪಗೌಡ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಸ್ವಾಗತಿಸಿದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಜನ್ನೂರು ಮಹದೇವು ಕಾರ್ಯಕ್ರಮದಲ್ಲಿ ವಿವಿಧ ಬೇಡಿಕೆಗಳ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿಪಂ ಅಧ್ಯಕ್ಷೆ ನಾಗಶ್ರೀ, ಉಪಾಧ್ಯಕ್ಷ ಮಹದೇವಪ್ಪ, ತಾಪಂ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷೆ ಪಾರ್ವತಮ್ಮ, ನಗರಸಭಾಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾಧಿಕಾರಿ ಎನ್. ಜಯರಾಂ, ಜಿಪಂ ಸಿಇಓ ಎಂ.ಆರ್. ಸೋಮಶೇಖರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ, ತಾಪಂ, ನಗರಸಭೆ, ಜಿಪಂ ಸದಸ್ಯರು, ಕುರುಬ ಸಮಾಜದ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.