ಧರ್ಮದ ನಿರ್ಲಕ್ಷ್ಯ ಆತಂಕಕಾರಿ: ಮಹೇಶ್
ಸಾಲಿಗ್ರಾಮ: ಧಾರ್ಮಿಕವಾಗಿ ಶ್ರೀಮಂತವಾಗಿರುವ ಭಾರತೀಯರು, ಇಂದು ತಮ್ಮ ಧರ್ಮವನ್ನೆ ಮರೆತು ಜೀವಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಸವಿತಾ ಸಮಾಜ ಕಲಾ ಸಂಘದ ವತಿಯಿಂದ ನಡೆದ ತ್ಯಾಗರಾಜ ಸ್ವಾಮಿಗಳ ಆರಾಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕೆಲಸ ಮಾಡಿದರು ಶಾಶ್ವತವಾಗಿ ಉಳಿದಾಗ ಮಾತ್ರ ಸಾರ್ಥಕವಾಗುತ್ತದೆ. ತಾಲೂಕಿನಲ್ಲಿ ಬೇರೆಡೆಗಳಂತೆ ಜಾತಿ ಜಾತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಸವಿತಾ ಸಮಾಜದ ಸಂಘದವರ ಮನವಿ ಮೇರೆಗೆ ಕೆ.ಆರ್.ನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ 20 ಲಕ್ಷ ಅಲ್ಲದೆ ಚನ್ನಂಗೆರೆ ಗ್ರಾಮದಲ್ಲಿಯೂ ಭವನ ನಿರ್ಮಾಣಕ್ಕೆ 10 ಲಕ್ಷ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ರೇಣುಕಾ ರಾಜಶೇಖರಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜ ಒಡೆದು ಆಳುವ ನೀತಿಯ ವಿರುದ್ಧ ಇಂದಿನ ಜನಾಂಗ ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಿ. ರವಿಶಂಕರ್ ಮಾತನಾಡಿದರು. ಪುತ್ತೂರು ಕಂಚಿಕಾಮಕೋಟಿ ಪೀಠದ ಸಾಕ್ಸಫೋನ್ ವಿದ್ವಾಂಸ ಪಿ.ಕೆ. ಗಣೇಶ್, ದಾಮೋದರ್, ಶಿವರಾಜು ಅವರುಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ನಾಗರಾಜು, ಸಾಲಿಗ್ರಾಮ ಗ್ರಾಪಂ ಅಧ್ಯಕ್ಷೆ ರಾಣಿರಾಜಣ್ಣ, ತಂದ್ರೆ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಸಮಾಜದ ತಾಲೂಕು ಅಧ್ಯಕ್ಷ ಸಂತೋಷ್, ಸಂಪತ್ಕುಮಾರ್, ಪ್ರಧಾನ ಕಾರ್ಯದರ್ಶಿ ಶಂಕರ್, ನಗರಾಧ್ಯಕ್ಷ ರಾಜೀವ್, ಚನ್ನಯ್ಯ, ಸಂತೊಷ್, ರಾಘವೇಂದ್ರ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.