ಪಕ್ಷಗಳಿಂದ ಹಿಂದುಳಿದ ವರ್ಗಗಳ ಶೋಷಣೆ: ಮಹೇಶ್
ಪಿರಿಯಾಪಟ್ಟಣ: ಹಿಂದುಳಿದ ಸಮುದಾಯಗಳನ್ನು ಮುಂಚೂಣಿ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಹಿಂದಿನಿಂದಲೂ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಬಿಸ್ಯ್ಪಿ ಪಕ್ಷದ ರಾಜ್ಯ ಸಂಚಾಲಕ ಎನ್.ಮಹೇಶ್ ಆರೋಪಿಸಿದರು.
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಪಕ್ಷದ ವತಿಯಿಂದ ಏರ್ಪಡಿಸಿದ್ದ ಬಹುಜನ ಸ್ವಾಭಿಮಾನಿ ರಾಜಕೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮೂರು ಮುಖ್ಯಮಂತ್ರಿಗಳನ್ನು ಕಂಡಿದ್ದು, ಅಧಿಕಾರದ ಆಸೆಯಿಂದ ಎರಡು ಹೋಳಾಗಿದೆ, ಬಿಜೆಪಿ ಮೂಲದಿಂದ ಬಂದ ಭ್ರಷ್ಟ ನಾಯಕರು ಮೂರು ಭಾಗಗಳನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ರಾಜ್ಯದಲ್ಲಿ ಹೊಸ ರಾಜಕೀಯ ಇತಿಹಾಸ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷ 2ಜಿ ತರಂಗ ವ್ಯವಹಾರದಲ್ಲಿ ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವಲ್ಲಿ 1.70 ಲಕ್ಷ ಕೋಟಿ ಲಂಚ ಪಡೆದು ಇಡಿ ದೇಶಕ್ಕೆ ಮೋಸ ಮಾಡಿದೆ. ಜೆಡಿಎಸ್ ಪಕ್ಷ ಪ.ಜಾತಿಯವರ ಏಳಿಗೆಗಾಗಲಿ, ರಾಜ್ಯದ ಏಳಿಗೆಗಾಗಲಿ ದುಡಿಯುತ್ತಿಲ್ಲ ಎಂದು ಮಹೇಶ್ ಆರೋಪಿಸಿದರು.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಎಲ್ಲ ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಫರ್ಧಿಸಲಿದ್ದು, ತಾಲೂಕಿನಲ್ಲಿ ಬಿಎಸ್ಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ದೇವದತ್ತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮಹದೇವ, ತಾಲೂಕು ಅಧ್ಯಕ್ಷ ದೇವರಾಜ್ಯ್, ಜಿಲ್ಲಾ ಕಾರ್ಯದರ್ಶಿ ಟಿ.ಎಚ್. ಶಿವರಾಜ್, ತಾಲೂಕು ಸಂಯೋಜಕ ಬಹುಜನ್, ರಾಜಮ್ಮ, ದೇವೇಂದ್ರಕುಮಾರ್, ಮಂಜು, ರಮೇಶ್, ಜಯರಾಂ, ಪ್ರಕಾಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.