ಪೊಲೀಸ್ರೇ ಸಂಜಯ್ ಹಂತಕರೆಲ್ಲಿ?
ಮೈಸೂರು: ಪಿಯುಸಿ ವಿದ್ಯಾರ್ಥಿ ಸಂಜಯ್ ರಾಥೋಡ್ ಅಪಹರಿಸಿ, ಹತ್ಯೆ ಮಾಡಿ ಒಂದೂವರೆ ತಿಂಗಳು ಕಳೆದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈವರೆಗೂ ಆರೋಪಿಗಳ ಬಗ್ಗೆ ಸಣ್ಣದೊಂದು ಸುಳಿವು ಸಹ ಸಿಕ್ಕಿಲ್ಲ. ಈ ವಿಚಾರವನ್ನು ಸ್ವತಃ ಪೊಲೀಸರೆ ಒಪ್ಪಿಕೊಂಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಅವರು, ಹತ್ತಾರು ತಂಡಗಳನ್ನು ರಚಿಸಿ, ತನಿಖೆ ಚುರುಕುಗೊಳಿಸಲು ಪ್ರಯತ್ನಿಸಿದರು. ಪ್ರತಿದಿನ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆ ನಡೆಸಿದರು. ಇದು ಫಲ ನೀಡದಿದ್ದಾಗ ಕೆಲಮೊಮ್ಮೆ ಇಡೀ ದಿನ ಅಂದರೆ ಬೆಳಗ್ಗೆಯಿಂದ ರಾತ್ರಿಯವರೆಗೂ ಸಭೆ ನಡೆಸಿದರೂ ಸಹ ಯಾವುದೇ ಫಲ ಸಿಕ್ಕಿಲ್ಲ. ಈ ಅಪಹರಣ- ಹತ್ಯೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಕ್ಲಿಷ್ಟಕರ ಪರಿಸ್ಥಿತಿ ಎದುರಾಗಿದೆ.
ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿ ಘಟಕದ ಪೊಲೀಸರಿಗೆ ವಹಿಸಲಾಗಿದೆ. ಸಿಸಿಬಿ ಪೊಲೀಸರು ಸಹ 1 ತಿಂಗಳಿಂದ ಹಲವಾರು ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಒಂದಕ್ಕೊಂದು ಸಂಪರ್ಕ ಸಿಗುತ್ತಿಲ್ಲ. ಹೀಗಾಗಿ, ಪ್ರಕರಣತ ತನಿಖೆಯಲ್ಲಿ ಪ್ರಗತಿ ಕಾಣುತ್ತಿಲ್ಲ.
ಮೃತನ ತಂದೆ ತಾರಾರಾಮ್ ಸಂಬಂಧಿಕರನ್ನು ಒಂದು ಸುತ್ತು ವಿಚಾರಣೆ ಮುಗಿಸಿರುವ ಪೊಲೀಸರು, ಈಗ ತಾರಾರಾಮ್ ಬಳಿ ಗಿರವಿ ಇಡುತ್ತಿದ್ದ ಗ್ರಾಹಕರತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಗೊಂಡಿರುವ ತನಿಖೆಗೆ ವಿಜಯನಗರ ಠಾಣೆ ಪೊಲೀಸರು ಸಾಥ್ ನೀಡುತ್ತಿದ್ದಾರೆ.
ಅಪಹರಣದಿಂದ ಹತ್ಯೆವರೆಗೆ: ಡಿ.12ರ ಸಂಜೆ 6.30 ರಷ್ಟರಲ್ಲಿ ವಿಜಯನಗರ ರೇಲ್ವೆ ಬಡಾವಣೆ ನಿವಾಸಿ ತಾರಾರಾಮ್ ಎಂಬವರ ಪುತ್ರ ಸಂಜಯ್ ರಾಥೋಡ್ (18) ರಸ್ತೆ ಬದಿಯಲ್ಲಿ ತಿಂಡಿ ತಿನ್ನುತ್ತಿದ್ದ. ಸಂಜೆ 7 ರಷ್ಟರಲ್ಲಿ ಸಂಜಯ್ ಮೊಬೈಲ್‌ನಿಂದ ಅಪರಿಚಿತ ವ್ಯಕ್ತಿಯೊಬ್ಬ ತಾರಾರಾಮ್‌ಗೆ ಕರೆ ಮಾಡಿ, ಸಂಜಯ್‌ನನ್ನು ಅಪಹರಿಸಿದ್ದೇವೆ, 50 ಲಕ್ಷ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ.
ಪದೇ ಪದೇ ಕರೆ ಮಾಡಿ ಮರು ಕ್ಷಣದಲ್ಲೆ ಮೊಬೈಲ್ ಸ್ವಿಚ್ ಆಫ್ ಮಾಡುತ್ತಿದ್ದ ಎಂದು ತಾರಾರಾಮ್ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಸಂಜಯ್ ಮೊಬೈಲ್ ನೆಟ್‌ವರ್ಕ್ ಆಧರಿಸಿ ರಾಮನಗರ, ಬಿಡದಿ, ಬೆಂಗಳೂರು, ಎಚ್.ಡಿ.ಕೋಟೆ, ತಿರುಪತಿ ಹೀಗೆ ಹಲವು ಕಡೆ ಪೊಲೀಸರು ಹುಡುಕಾಡಿದರು. ಆದರೆ, ಸಂಜಯ್ ಮಾತ್ರ ಸಿಕ್ಕಲ್ಲ. ಡಿ.19ರಂದು ಮೈಸೂರು ತಾಲೂಕು ಜಯಪುರ ಹೋಬಳಿ ದೊಡ್ಡಕಾಟೂರು ವರುಣಾ ನಾಲೆಯಲ್ಲಿ ಸಂಜಯ್ ಶವ ಪತ್ತೆಯಾಯಿತು.
ಅಪಹರಣಕಾರರು ಉತ್ತರ ಭಾರತ ಶೈಲಿಯಲ್ಲಿ ಹಿಂದಿ ಮಾತನಾಡುತ್ತಿದ್ದರು. ಈ ಪ್ರಕರಣದಲ್ಲಿ ತಾರಾರಾಮ್ ಅಥವಾ ಸಂಜಯ್‌ಗೆ ಪರಿಚಯ ಇರುವವರೆ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಯಾವುದೇ ಶಂಕೆಯೂ ನಿಜ ಆಗಿಲ್ಲ. ತನಿಖೆ ಇನ್ನೂ ನಡೆಯುತ್ತಲೆ ಇದೆ.
ಇದೇ ರೀತಿ ಒಂದೂವರೆ ವರ್ಷದ ಹಿಂದೆ ಹುಣಸೂರು ನಿವಾಸಿಗಳು ಹಾಗೂ ಮಹಾಜನ ಕಾಲೇಜಿನ ವಿದ್ಯಾರ್ಥಿಗಳಾದ ವಿಘ್ನೇಶ್ ಮತ್ತು ಸುಧೀಂದ್ರ ಎಂಬವರನ್ನು ದುಷ್ಕರ್ಮಿಗಳು ಅಪಹರಿಸಿ ಕೊಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ, ಈಗ ಸಂಜಯ್ ಅಪಹರಣ- ಹತ್ಯೆ ನಡೆದು ಒಂದೂವರೆ ತಿಂಗಳಾದರೂ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ವಿಫಲ ಆಗಿದ್ದಾರೆ.
- ಬಿ.ಶೇಖರ್ ಗೋಪಿನಾಥ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.