ಫೆ.1ರಿಂದ ನರಸಿಂಹಸ್ವಾಮಿ ದೇಗುಲದ ಕುಂಭಾಭಿಷೇಕ
ಸಾಲಿಗ್ರಾಮ: ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯದ ವತಿಯಿಂದ ಜೀರ್ಣೋದ್ಧಾರಗೊಳಿಸಿರುವ 700 ವರ್ಷಗಳಷ್ಟು ಪ್ರಾಚೀನವಾದ ನರಸಿಂಹಸ್ವಾಮಿ ದೇವಾಲಯದ ಕುಂಬಾಭಿಷೇಕ ಮತ್ತು ರಾಮಾನುಜಾಚಾರ್ಯರ ತೀರ್ಥಕೊಳ ಸಂಪ್ರೋಕ್ಷಣ ಕಾರ್ಯಕ್ರಮ ಫೆ.1 ರಿಂದ 4 ರವರೆಗೆ ನಡೆಯಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉದ್ಘಾಟಿಸುವರು.
ಫೆ.1ರಂದು ಯಾಗಶಾಲಾ ಕಾರ್ಯಕ್ರಮ ನಡೆಯಲಿದ್ದು, ಕಳಸ ಪ್ರತಿಷ್ಠಾಪನೆ ನೆರವೇರಲಿದೆ. ಸಂಜೆ 5ಕ್ಕೆ ಚಿತ್ರನಟ ಮಂಡ್ಯ ರಮೇಶ್ ತಂಡದವರಿಂದ 'ಚೋರ ಚರಣದಾಸ' ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ಫೆ.2ರಂದು ಯೋಗ ನರಸಿಂಹಸ್ವಾಮಿಯ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ದೇವಾಲಯಕ್ಕೆ ಕರೆ ತರಲಾಗುತ್ತದೆ.
ಅಂದು ಸಂಜೆ 5ಕ್ಕೆ ಚಿತ್ರನಟ ಯಶ್ ಮತ್ತು ಸುಗಮ ಸಂಗೀತ ಹಿನ್ನಲೆ ಗಾಯಕಿ ಎಂ.ಡಿ. ಪಲ್ಲವಿ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಫೆ.3ರಂದು ಜೀರ್ಣೋದ್ಧಾರ ಮಹಾಕುಂಬಾಭಿಷೇಕ ಮತ್ತು ಸಂಪ್ರೋಕ್ಷಣೆ ನೆರವೇರಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉದ್ಘಾಟಿಸಲಿದ್ದು, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ, ಸಂಸದ ಚಲುವರಾಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸುವರು.
ಅಂದು ಸಂಜೆ 5ಕ್ಕೆ ಚಿತ್ರನಟ ದರ್ಶನ್ ಅವರಿಂದ ರಸಮಂಜರಿ ಕಾರ್ಯಕ್ರಮ ಮತ್ತು ಅಪ್ರಭ ರಂಬೆ ತಂಡದವರಿಂದ ರೇಣುಕಾಪ್ರಸಾದ್ ನಿರ್ದೇಶನದಲ್ಲಿ 'ಕೃಷ್ಣ ಸಂಧಾನ' ಎಂಬ ಹಾಸ್ಯನಾಟಕ ಪ್ರದರ್ಶನಗೊಳ್ಳಲಿದೆ.
ಫೆ.4ರ ಸಂಜೆ 4ಕ್ಕೆ ವರನಟ ಡಾ.ರಾಜಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಚಿತ್ರನಟರಾದ ಶಿವರಾಜಕುಮಾರ್, ಪುನೀತ್ ರಾಜ್ಕುಮಾರ್ ಭಾಗವಹಿಸಲಿದ್ದು, ಕಾರ್ಯಕ್ರಮದ ನಂತರ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಿದೆ.
ನೂತನ ವಿಗ್ರಹ: ಪ್ರಾಚೀನ ದೇವಾಲಯದ ಯೋಗ ನರಸಿಂಹಸ್ವಾಮಿ ಮೂಲ ವಿಗ್ರಹ ಭಗ್ನಗೊಂಡಿದ್ದರಿಂದ, ಶಾಸಕ ಸಾ.ರಾ. ಮಹೇಶ್ ವೈಯಕ್ತಿಕವಾಗಿ 5 ಲಕ್ಷ ವೆಚ್ಚದಲ್ಲಿ ನೂತನ ವಿಗ್ರಹ ಮಾಡಿಸಿ 10 ತಿಂಗಳ ಹಿಂದೆ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದರು.
ಭರದ ಸಿದ್ಧತೆ: ದೇವಾಲಯ ಜೀರ್ಣೋದ್ಧಾರದ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಮತ್ತು ಡಾ.ರಾಜ್ ಪ್ರತಿಮೆ ಅನಾವರಣಕ್ಕೆ ಈಗಾಗಲೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ. ದೇವಾಲಯವನ್ನು ಸುಣ್ಣ ಬಣ್ಣಗಳಿಂದ ಸಿಂಗರಿಸಲಾಗಿದೆ. ರಸ್ತೆ ದುರಸ್ತಿ ಜತೆಗೆ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿದೆ.
ಭಕ್ತಾದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಸಾ.ರಾ. ಮಹೇಶ್ ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.