ಫೆ.5ರಂದು ಡಾ.ಕೆಂಪೇಗೌಡರಿಗೆ ಹಾಮಾನಾ ಪ್ರಶಸ್ತಿ ಪ್ರದಾನ
ಮೈಸೂರು: ಡಾ. ಹಾಮಾನ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಫೆ.5ರಂದು ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ.
ಅಂದು ಬೆಳಗ್ಗೆ 10.30ಕ್ಕೆ ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕಲ್ಬುರ್ಗಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾಷಾ ವಿಜ್ಞಾನಿ ಡಾ. ಕೆ.ಕೆಂಪೇಗೌಡ ಅವರು ರಚಿಸಿರುವ 'ಮೂಲ ಕನ್ನಡ ಭಾಷೆ' ಎಂಬ ಕೃತಿಯನ್ನು ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಲೋಕಾರ್ಪಣೆಗೊಳಿಸುವರು. ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು. ಮುಕ್ತ ವಿವಿ ಕುಲಸಚಿವ ಪ್ರೊ. ಬಿ.ಎಸ್. ವಿಶ್ವನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಈ ಸಂದರ್ಭ ಡಾ. ಹಾಮಾನ ಅವರ 'ವ್ಯಕ್ತಿ ಮತ್ತು ವ್ಯಕ್ತಿತ್ವ' ಎಂಬ ವಿಷಯ ಕುರಿತು ಪ್ರಾಧ್ಯಾಪಕ ಡಾ. ಎನ್. ಎಸ್. ತಾರಾನಾಥ್, ಸಾಹಿತ್ಯಿ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ. ಕೆ.ರಮೇಶ್ ಹಾಗೂ ಕನ್ನಡ ಕಟ್ಟುವಿಕೆ ಎಂಬ ವಿಷಯ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ. ಪಂಡಿತಾರಾಧ್ಯ ಮಾತನಾಡುವರು ಎಂದು ಅವರು ತಿಳಿಸಿದರು.
ಪ್ರಶಸ್ತಿ ಪ್ರದಾನ: ಮಧ್ಯಾಹ್ನ 3.15ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಷಾ ವಿಜ್ಞಾನಿ ಡಾ. ಕೆ.ಕೆಂಪೇಗೌಡ ಅವರಿಗೆ ಡಾ. ಹಾಮಾನ ಪ್ರಶಸ್ತಿಯನ್ನು ಸಂಸ್ಕೃತ ವಿವಿ ಕುಲಪತಿ ಡಾ.ಮಲ್ಲೇಪುರಂ ವೆಂಕಟೇಶ ಪ್ರದಾನ ಮಾಡುವರು. ಡಾ.ಸೋಮಶೇಖರಗೌಡ ಹಾಗೂ ಡಾ.ಪದ್ಮಾ ಶೇಖರ್ ಅವರ 'ಕನ್ನಡದ ಕಾರಣಿಕೆ ಹಾಮಾನ' ಎಂಬ ಕೃತಿಯನ್ನು ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಲೋಕಾರ್ಪಣೆಗೊಳಿಸುವರು. ಕರ್ನಾಟಕ ವಿವಿ ಕುಲಪತಿ ಡಾ. ಎಚ್.ಬಿ. ವಾಲಿಕಾರ ಅಧ್ಯಕ್ಷತೆ ವಹಿಸುವರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ಅತಿಯಾಗಿ ಭಾಗವಹಿಸುವರು ಎಂದರು.
ವಿದ್ವಾಂಸ ಡಾ. ರಾಗೌ, ಸಂಚಾಲಕರಾದ ಡಾ. ಸೋಮಶೇಖರಗೌಡ, ಡಾ. ಪದ್ಮಾ ಶೇಖರ್, ಡಾ. ಹ.ಕ. ರಾಜೇಗೌಡ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.