ಸುಸಂಸ್ಕೃತರಾಗಿ ಮಕ್ಕಳಿಗೆ ಪಾಠ ಹೇಳಿ
ಮೈಸೂರು: ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ಮೊದಲು ಒಳ್ಳೆಯವರಾಗಬೇಕು. ತಮ್ಮ ಕೆಟ್ಟ ಹವ್ಯಾಸಗಳನ್ನು ಬಿಟ್ಟು ಪಾಠ ಹೇಳಿದಾಗ ಮಾತ್ರ ಮಕ್ಕಳು ಗಮನವಿಟ್ಟು ಕೇಳುತ್ತಾರೆ ಎಂದು ಹಿರಿಯ ಸಾಹಿತಿ ಪ್ರೊ. ದೇಜಗೌ ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಸಂಯುಕ್ತವಾಗಿ ಜಗನ್ಮೋಹನ ಅರಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಾಗೂ ಮಕ್ಕಳ ಹಕ್ಕುಗಳ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಆಸ್ತಿ ಮುಖ್ಯವಲ್ಲ, ಜ್ಞಾನ ಮುಖ್ಯ. ಸ್ವಾಮಿ ವಿವೇಕಾನಂದರು ತಮ್ಮ ಜ್ಞಾನದಿಂದಲೇ ಅಮೆರಿಕಾ, ಇಂಗ್ಲೆಂಡ್ ಪ್ರವಾಸ ಮಾಡಿ ಬೆಳೆದವರು. ಓದು ಇಲ್ಲದಿದ್ದರೆ ಜ್ಞಾನ ಬೆಳೆಯುವುದಿಲ್ಲ. ವಿದ್ಯೆ ಸಂಪಾದನೆಗಾಗಿ ಪ್ರತಿನಿತ್ಯ ಓದುವುದು, ಬರೆಯುವುದನ್ನು ಕಲಿಯಬೇಕು. ರಾಮಾಯಣ, ಮಹಾಭಾರತವನ್ನು ಓದಿದರೆ ಜೀವನದಲ್ಲಿ ಉತ್ಸಾಹ ಬರುತ್ತದೆ ಎಂದು ಅವರು ತಿಳಿಸಿದರು.
ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರಂತಹ ಆದರ್ಶ ಪುರುಷರು ಜಗತ್ತಿನಲ್ಲಿ ಎಲ್ಲೂ ಇಲ್ಲ. ಅಧ್ಯಾಪಕರು ಮೊದಲು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ದಿನಕ್ಕೆ ಕನಿಷ್ಠ 1 ಗಂಟೆಯಾದರೂ ಓದುವ ಮೂಲಕ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಶಾಲಾ ಮಕ್ಕಳಿಗೆ ಪಾಠ ಹೇಳುವುದು ಕಷ್ಟಕರ. ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಹೇಳುವುದು ಸುಲಭ. ಓದಿನ ಜೊತೆಗೆ ಸಂಗೀತ, ನಾಟಕಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಉತ್ತಮವಾದ ಮಕ್ಕಳ ನಾಟಕಗಳನ್ನು ಆಡಿಸಬೇಕು ಎಂದು ಅವರು ಸಲಹೆ ನೀಡಿದರು.
ಬಾಲಕಾರ್ಮಿಕ ಪದ್ಧತಿ ನಿಲ್ಲಲಿ: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎನ್.ಟಿ. ವೆಂಕಟೇಶ್ ಮಾತನಾಡಿ, ಮಕ್ಕಳ ಹಕ್ಕುಗಳು ರಕ್ಷಣೆ ಆಗಬೇಕು. ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಭ್ರೂಣಹತ್ಯೆ, ಮಕ್ಕಳ ಮಾರಾಟ ಮತ್ತು ಸಾಗಣೆ ನಿಷೇಧಿಸಬೇಕು. ಎಲ್ಲಿ ಮಕ್ಕಳ ಶೋಷಣೆ ನಡೆಯುತ್ತದೆಯೊ ಆ ಸಮಾಜಕ್ಕೆ ಭವಿಷ್ಯ ಇಲ್ಲ. ಮಕ್ಕಳಿಗೆ ದಂಡಿಸುವುದು ಬೇಡ. ಪ್ರೀತಿ ವಿಶ್ವಾಸದ ಮೂಲಕ ಅವರನ್ನು ತಿದ್ದುವಂತಹ ಕಾರ್ಯ ಆಗಬೇಕು ಎಂದು ಹೇಳಿದರು.
ಮಕ್ಕಳು ಹಾಗೂ ಅತಿಥಿಗಳು ಒಗ್ಗೂಡಿ ಸಮಾವೇಶ ಉದ್ಘಾಟಿಸಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಎಚ್.ಆರ್. ಉಮೇಶ್ ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು.
ರಂಗಾಯಣ ನಿರ್ದೇಶಕ ಡಾ.ಬಿ.ವಿ. ರಾಜಾರಾಂ, ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಬಿ.ಎಸ್. ಅನುರಾಧಾ, ಶಿವರಾಜೇಗೌಡ, ಮಾಜಿ ಸದಸ್ಯ ಡಾ. ಮಧು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ರೋಟರಿ ಮೈಸೂರು ಉತ್ತರ ಅಧ್ಯಕ್ಷ ರತ್ನಾಕರ್, ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಡಯಟ್ ಹಿರಿಯ ಉಪನ್ಯಾಸಕಿ ಮಂಜುಳ, ಯೋಗ ಶಿಕ್ಷಕ ಯೋಗಾನಂದ ಗುರು, ಅಧಿಕಾರಿಗಳಾದ ಪದ್ಮಾ, ಮುಕ್ತ ಮೊದಲಾದವರು ಇದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎನ್.ಆರ್. ವಿಜಯ್ ಸ್ವಾಗತಿಸಿದರು. ಗೀತಾ ನಿರೂಪಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.