ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಗವಿಕಲರ ಸ್ಥಿತಿಗತಿ ಅರಿಯಲು ಅಧ್ಯಯನ

Vishwanath S
Updated On : 2 Jul 2013, 12:50 pm

ಕ.ಪ್ರ.ವಾರ್ತೆ ,  ಮೈಸೂರು ,  ಜು. 1
ಅಂಗವಿಕಲರ ಸಾಮಾಜಿಕ ಸ್ಥಿತಿಗತಿ ಅರಿಯಲು ಮೈಸೂರು ವಿವಿ ಜತೆಗೂಡಿ ಅಧ್ಯಯನ ಹಾಗೂ ಸಮೀಕ್ಷೆ ನಡೆಸಲು ಚಿಂತಿಸಲಾಗಿದೆ ಎಂದು ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಕೆ.ವಿ. ರಾಜಣ್ಣ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶೇ. 3ರ ಆಯವ್ಯಯ ಮೀಸಲಾತಿ ಕ್ರಿಯಾಯೋಜನೆ ಹಾಗೂ ಅದರ ಬಳಕೆ, ಅಂಗವಿಕಲರಿಗೆ ಮೀಸಲಾತಿಯನ್ವಯ ನೀಡಲಾದ ವಸತಿ, ನಿವೇಶನ, ಅಂಗವಿಕಲರ ರದ್ದಾದ ಮಾಸಾಶನ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಂಗವಿಕಲರು ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅವರಿಗೆ ಸಾಮಾಜಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಸ್ವಂತ ಅಣ್ಣ, ತಮ್ಮಂದಿರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನು ಕ್ರೋಢೀಕರಿಸಲು ಸಾಮಾಜಿಕ ಅಧ್ಯಯನದ ಅವಶ್ಯಕತೆ ಇದೆ. ಈ ಸಂಬಂಧ ಮೈಸೂರು ವಿವಿ ಕುಲಸಚಿವರೊಂದಿಗೆ ಮಾತನಾಡಿದ್ದೇನೆ. ಪ್ರಾಯೋಗಿಕ ಹಂತವಾಗಿ ಮೈಸೂರು ಜಿಲ್ಲೆಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಾಗುವುದು. ನಂತರ ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಶೇ. 3 ರಷ್ಟು ಆಯವ್ಯಯವನ್ನು ಸಮರ್ಪಕವಾಗಿ ಖರ್ಚು ಮಾಡಬೇಕಿದೆ. ಈಗಾಗಲೇ ಶೇ. 60 ಖರ್ಚು ಮಾಡಲಾಗಿದ್ದು, ಇನ್ನುಳಿದ ಹಣವನ್ನು ಬಳಕೆ ಮಾಡೇಕಿದೆ. ಟಿ. ನರಸೀಪುರ, ಕೆ.ಆರ್. ನಗರ, ಮೈಸೂರು ನಗರ ವ್ಯಾಪ್ತಿಯಲ್ಲಿ ಸಮಸ್ಯೆ ಇದೆ. ಹೀಗಾಗಿ ಖರ್ಚು ಮಾಡದ ಹಣವನ್ನು ಸದ್ಯದಲ್ಲಿಯೇ ಫಲಾನುಭವಿಗಳಿಗೆ ವಿತರಿಸಲಾಗುವುದು.
ಬಸವ ವಸತಿ ಯೋಜನೆಯಡಿ ರಾಜ್ಯಾದ್ಯಂತ ಅಂಗವಿಕಲರಿಗೆ 14400 ನಿವೇಶನ ವಿತರಿಸಲಾಗಿದ್ದು, ಅವುಗಳಲ್ಲಿ 11 ಸಾವಿರ ನಿವೇಶನಗಳಲ್ಲಿ ಮನೆ ಕಟ್ಟಲಾಗಿದೆ. ತುಮಕೂರು ಪ್ರಥಮ ಸ್ಥಾನದಲ್ಲಿದೆ. ಅಂಗವಿಕಲರ ಹೆಸರು ಹೇಳಿಕೊಂಡು ಎನ್‌ಜಿಒಗಳು ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಮಗೆ ದೂರು ಬಂದಿತು.
ಅದರನ್ವಯ 2012 ರಲ್ಲಿ 20 ಸಂಸ್ಥೆಗಳು, 2013ನೇ ಸಾಲಿನಲ್ಲಿ 16 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಹಾಗೆ ಅಂಗವಿಕಲರಿಗಾಗಿ ಶಾಲೆ ತೆರೆಯುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಅವರು ಭರವಸೆ ನೀಡಿದರು.
ಪದವೀಧರರಿಗೆ ಲ್ಯಾಪ್‌ಟಾಪ್: ಉನ್ನತ ಶಿಕ್ಷಣ ಪೂರೈಸುವ ಅಂಗವಿಕಲ ಅಭ್ಯರ್ಥಿಗಳಿಗೆ ಲ್ಯಾಪ್‌ಟಾಪ್ ಪೂರೈಸುವ ಬಗ್ಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸುವಂತೆ ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ. ಸಾಮಾನ್ಯ ವ್ಯಕ್ತಿ ಅಂಗವಿಕಲ ವಧು ಅಥವಾ ವರನನ್ನು ವಿವಾಹವಾದರೆ 25 ಸಾವಿರ ಹಾಗೂ ಅಂಗವಿಕಲ ವಧು- ವರ ವಿವಾಹವಾದರೆ 50 ಸಾವಿರ ನೀಡುವಂತೆಯೂ ಕೇಳಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ. ರಾಮೇಗೌಡ, ಉಪವಿಭಾಗಾಧಿಕಾರಿ ಬಸವರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement