ಅಕ್ರಮ ಮರಳು ದಂಧೆ ವಿರುದ್ಧ ಕ್ರಮ: ಎಸ್ಪಿ
ಕ.ಪ್ರ.ವಾರ್ತೆ , ಮೈಸೂರು , ಜು. 1
ಜಿಲ್ಲೆಯಲ್ಲಿ ನಡೆಯತ್ತಿರುವ ಅಕ್ರಮ ಮರಳು ದಂಧೆಯ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ನೂತನ ಎಸ್ಪಿ ಅಭಿನವ್ ಖರೆ ಹೇಳಿದರು. ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ 60- 70 ಮಂದಿ ಪೊಲೀಸರು ರಾತ್ರಿ ವೇಳೆ ಗಸ್ತಿನಲ್ಲಿದ್ದಾರೆ. ಇವರ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಗಸ್ತಿನಲ್ಲಿದ್ದಾರೆ. ಅಕ್ರಮವಾಗಿ ಮರಳು ಸಾಗಿಸುವ 2- 3 ಲಾರಿಗಳನ್ನು ಪ್ರತಿದಿನ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಟಿ. ನರಸೀಪುರ, ನಂಜನಗೂಡು, ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಮರಳು ಗಣಿಗಾರಿಕೆ ನಡೆಯುತ್ತಿದೆ. ಹಲವರು ಪರವಾನಗಿ ಪಡೆದು ಹಗಲಿನಲ್ಲಿ ಮರಳು ಸಾಗಿಸುತ್ತಿದ್ದಾರೆ. ಆದರೆ, ರಾತ್ರಿ ವೇಳೆಯಲ್ಲಿ ಮಾತ್ರ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವುದಾಗಿ ಅವರು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.