ಆದಿವಾಸಿ ಅಂಗವಿಕಲರಿಗೆ ನೆರವು ನೀಡಲು ಮನವಿ
ಮೈಸೂರು: ಎಚ್.ಡಿ. ಕೋಟೆ ತಾಲೂಕಿನ ಆದಿವಾಸಿ ಅಂಗವಿಕಲರಿಗೆ ನೆರವು ನೀಡುವಂತೆ ಸಿಕ್ರಂ ಜಿಲ್ಲಾ ಮಾನವ ಹಕ್ಕುಗಳ ಕೇಂದ್ರದಿಂದ ಅಂಗವಿಕಲರ ಅಧಿನಿಯಮ ಆಯುಕ್ತ ಕೆ.ವಿ. ರಾಜಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ಆದಿವಾಸಿಗಳು ವಾಸಿಸುವ ಹಾಡಿಗಳಲ್ಲಿ ರಸ್ತೆ, ನೀರು, ಆರೋಗ್ಯ, ವಸತಿ, ವೈದ್ಯಕೀಯ ಸೇರಿದಂತೆ ಹಲವಾರು ಮೂಲ ಸಮಸ್ಯೆಗಳಲ್ಲಿ ಸಿಕ್ಕಿ ನಲುಗಿ ಹೋಗಿವೆ. ಇದರೊಟ್ಟಿಗೆ ಇಲ್ಲಿನ ಬಹುತೇಕ ಹಾಡಿಗಳಲ್ಲಿ ಸರ್ಕಾರಿ ಸೌಲಭ್ಯಗಳು ಸಿಗದೆ ಜನ ವಂಚನೆಗೊಳಗಾಗಿದ್ದಾರೆ. ನಡಾ ಹಾಡಿಯ ಎನ್.ಎಂ. ರಾಜೇಶ್ ಎಂಬಾತನಿಗೆ ಬರುತ್ತಿದ್ದ ಮಾಸಾಶನ ನಿಂತು ಹೋಗಿದೆ. ಆನೆಮಾಳ ಹಾಡಿಯ ಮಿಳ್ಳಮ್ಮ ಅವರಿಗೂ ಇದೇ ರೀತಿ ತೊಂದರೆ ಆಗಿದೆ. ಆದ್ದರಿಂದ ಕೂಡಲೇ ಮಾಸಾಶನ ಒದಗಿಸುವಂತೆ ಸಿಕ್ರಂ ಜಿಲ್ಲಾ ಮಾನವ ಹಕ್ಕುಗಳ ಕೇಂದ್ರದ ಸಂಯೋಜಕ ಪ್ರಸನ್ನ ಕೋರಿದರು.
ಮಾಸಾಶನ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅಂಕಿ- ಅಂಶಗಳ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 4236 ಮಂದಿ ಅಂಗವಿಕಲರು ಮಾಸಾಶನ ಸೌಲಭ್ಯ ಪಡೆಯುತ್ತಿದ್ದರು. ಈ ಅಂಕಿ- ಅಂಶಗಳು ಅನುಮಾನಕ್ಕೆ ಕಾರಣವಾಗಿದ್ದರಿಂದ ಪರಿಷ್ಕೃತ ಪಟ್ಟಿ ತಯಾರಿಸಲಾಯಿತು. ಆಗ 2437 ಮಂದಿ ಪಟ್ಟಿಯಲ್ಲಿದ್ದರು. ಇನ್ನುಳಿದ ಮಂದಿ ಹೆಸರು ಬಿಟ್ಟಿದ್ದಕ್ಕೆ ಆಕ್ಷೇಪಣೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಮರು ಪಟ್ಟಿ ತಯಾರಿಸಲು ಜಿಲ್ಲಾಧಿಕಾರಿ ಮೂಲಕ ಸೂಚಿಸಿದ್ದೇನೆ .
-ಕೆ.ವಿ. ರಾಜಣ್ಣ, ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ